Soraba | ವಿಶ್ವ ಹಿಂದೂ ಮಹಾಸಭಾದಿಂದ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನೆಗೆ ಜನ ಸಾಗರ ; ಬಿವೈಆರ್ ಭಾಗಿ

0 764

ಸೊರಬ: ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ವಿಶ್ವ ಹಿಂದೂ ಮಹಾಸಭಾ ವತಿಯಿಂದ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ವೈಭವದಿಂದ ಜರುಗಿತು.

ಯುವ ಜನತೆ, ಮಹಿಳೆಯರು, ಮಕ್ಕಳು, ಹಿರಿಯರು ಎನ್ನದೇ ಭಕ್ತ ಸಮೂಹವೇ ಮೆರವಣಿಯಲ್ಲಿ ಸಾಗಿಬಂದಿತು. ಚಂಡೆಮೇಳ, ಗೀಗೀ ಪದ ಸೇರಿದಂತೆ ಕಲಾತಂಡಗಳ ನಡುವೆ ಸಡಗರದಿಂದ ಶಾಂತಿಯುತವಾಗಿ ಮೆರವಣಿಗೆ ನಡೆಯಿತು. ಶ್ರೀ ಸೀತಾರಾಮಚಂದ್ರ ದೇವಸ್ಥಾನ ಸಮೀಪ ಗುಡಿಗಾರ ಸಮಾಜದವರು ಹಾಗೂ ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘಟನೆಯವರು ಗಣೇಶಮೂರ್ತಿಗೆ ಹಾರ ಸಮರ್ಪಿಸಿದರು.

ಸಂಘಟನೆಗಳ ಪರವಾಗಿ ಗಣೇಶ ಮೂರ್ತಿಗೆ ಬೃಹತ್ ಹಾರ ಸಮರ್ಪಿಸಿದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಯುವಶಕ್ತಿ ರಾಷ್ಟ್ರ ಶಕ್ತಿ, ವೀರ ಸಾವರ್ಕರ್ ಹಾಗೂ ಬಾಲಗಂಗಾಧರ ತಿಲಕರು ಸೇರಿದಂತೆ ಅನೇಕರು ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡರು. ಯುವಶಕ್ತಿ ಒಗ್ಗಟ್ಟಿನಿಂದ ಅಖಂಡ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಗಣೇಶೋತ್ಸವ ಆಚರಣೆ ಮಾಡುತ್ತಿರುವುದು ಸಂತಸದ ವಿಷಯ. ಅನೇಕ ಕಾರ್ಯಕರ್ತರ ತ್ಯಾಗ ಬಲಿದಾನದ ಪರಿಣಾಮ ಆಯೋಧ್ಯದಲ್ಲಿ ಭವ್ಯವಾದ ಶ್ರೀರಾಮಚಂದ್ರನ ಮಂದಿರ ನಿರ್ಮಾಣವಾಗುತ್ತಿದೆ ಎಂದರು.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಅಪ್ಪು ಸರ್ಕಲ್, ಚಾಮರಾಜಪೇಟೆ ಮೂಲಕ ಖಾಸಗಿ ಬಸ್ ನಿಲ್ದಾಣದ ವೃತ್ತ, ಮುಖ್ಯರಸ್ತೆ ಮಾರ್ಗವಾಗಿ ದಂಡಾವತಿ ನದಿವರೆಗೆ ಮೆರವಣಿಗೆ ನಡೆಯಿತು. ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಲ್ಲಿ ಹಾಡಿನ ಸದ್ದಿಗೆ ಯುವಕ-ಯುವತಿಯರು ಹೆಜ್ಜೆ ಹಾಕಿದರು. ಭಗವಾಧ್ವಜ ಹಿಡಿದು ಯವಕರು ಕುಣಿದಾಡಿದರು. ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಯುವ ಜನತೆ ಮಾರ್ಗದುದ್ದಕ್ಕು ಜೈ ಶ್ರೀರಾಮ್ ಘೋಷಣೆಯೊಂದಿಗೆ ಕುಣಿದು ಕುಪ್ಪಳಿಸಿದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿವಿಧ ಸಂಘಟನೆಯವರು ಲಘು ಉಪಹಾರ, ಪಾನಕ, ಮಜ್ಜಿಗೆ ವಿತರಣೆ ಮಾಡಿದರು. ಪೊಲೀಸ್ ಇಲಾಖೆಯಿಂದ ಸಿಪಿಐ ಎಲ್ ರಾಜಶೇಖರ್, ಪಿಎಸ್‌ಐಗಳಾದ ನಾಗರಾಜ್ ಹಾಗೂ ಮಾಳಪ್ಪ ಚಿಪ್ಪಲಕಟ್ಟೆ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಘಟನೆಯ ಕಾರ್ಯಕರ್ತರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು.

ಮೆರವಣಿಗೆಯಲ್ಲಿ ವಿಶ್ವ ಹಿಂದೂ ಮಹಾಸಭಾ ಗೌರವಾಧ್ಯಕ್ಷ ಸಂಜೀವ್ ಆಚಾರ್, ಅಧ್ಯಕ್ಷ ಜೆ. ನಿರಂಜನ್, ಖಜಾಂಚಿ ಎಸ್.ಎನ್. ಶರತ್, ಸಹಖಜಾಂಚಿ ಶರತ್, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಎಚ್.ಎಲ್. ಚಂದನ್, ಬಜರಂಗದಳ ಜಿಲ್ಲಾ ಸಹಸಂಯೋಜಕ ಬಿ. ಶಶಿಕುಮಾರ್, ಮಾತೃ ಮಂಡಳಿಯ ವಾಸಂತಿ ನಾವುಡಾ, ವೀಣಾ ಶ್ರೀಧರ್, ದುರ್ಗಾವಾಹಿನಿಯ ಕೋಮಲಾ ಪುರಾಣಿಕ್, ಕಾವ್ಯಾ, ಕಾರ್ಯಕರ್ತರಾದ ಕೆ.ವಿ. ವಿನಾಯಕ, ಆನಂದ, ರಂಗನಾಥ, ಮಣಿಕಂಠ, ವೀರೇಶ್, ಸೂರಜ್, ರಾಘು ಮಡಿವಾಳ್, ಪ್ರವೀಣ್ ವಿಶ್ವಕರ್ಮ, ನಿಕಿಲ್, ಕಾರ್ತಿಕ, ಅರುಣ್ ಭಂಡಾರಿ, ಅಭಿ, ವಿನಾಯಕ, ಸಚಿನ್, ಅರುಣ್, ಅಮೃತಾ, ಭಾಸ್ಕರ, ಪ್ರಮುಖರಾದ ಪಾಣಿ ರಾಜಪ್ಪ, ಪ್ರಕಾಶ್ ತಲಕಾಲಕೊಪ್ಪ, ವೀರೇಶ್ ಮೇಸ್ತ್ರಿ, ಮಧುರಾಯ್ ಜಿ. ಶೇಟ್, ಜಿ. ಕೆರಿಯಪ್ಪ, ಸುರೇಶ್ ಭಂಡಾರಿ, ಪ್ರಶಾಂತ್ ಮೇಸ್ತ್ರಿ, ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!