ಚಂದ್ರಗುತ್ತಿಗೆ ಹರಿದು ಬಂತು ಭಕ್ತ ಸಾಗರ

0 0

ಸೊರಬ: ಇಲ್ಲಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದಕ್ಕೆ ಶ್ರಾವಣ ಶುಕ್ರವಾರದ ನಿಮಿತ್ತ ಲಕ್ಷಾಂತರ ಭಕ್ತರು ಆಗಮಿಸಿ, ಶ್ರೀ ದೇವಿಯ ದರ್ಶನ ಪಡೆದರು.


ಶ್ರೀ ದೇವಿಯ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಸಲಾಗಿದ್ದು, ಭಕ್ತರಿಗೆ ಬೆಳಗ್ಗೆಯಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಉತ್ತರ ಕರ್ನಾಟಕದ ಭಕ್ತರು ಶ್ರದ್ಧಾ ಭಕ್ತಿಯಿಂದ ಶ್ರಾವಣ ಮಾಸದ ಆಚರಣೆ ಮಾಡುತ್ತಾರೆ. ಶ್ರಾವಣ ಮಾಸದ ನಿಮಿತ್ತ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನರೆವೇರುತ್ತವೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಬಳಿಕ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯು ಸಹ ಹೆಚ್ಚಾಗಿದ್ದು, ಮಹಿಳಾ ಭಕ್ತರ ಸಂಖ್ಯೆಯ ದ್ವಿಗುಣವಾಗಿದೆ.
ತಾಲೂಕು ಸೇರಿದಂತೆ ಹಿರೇಕೆರೂರು, ರಾಣೆಬೆನ್ನೂರು, ರಟ್ಟೆಹಳ್ಳಿ, ದಾವಣಗೆರೆ, ಹರಿಹರ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಬಳ್ಳಾರಿ ಸೇರಿದಂತೆ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದು, ಉತ್ತರ ಕರ್ನಾಟಕ ಭಾಗದ ಭಕ್ತರ ದಂಡು ಸನ್ನಿಧಾನಕ್ಕೆ ಹರಿದು ಬಂದಿತ್ತು. ಮಳೆಯ ನಡುವೆಯೂ ಭಕ್ತರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.


ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತಿ, ಮಾತಂಗಿ, ಪರಶುರಾಮ, ತ್ರಿಶೋಲ ಭೈರಪ್ಪ ದೇವರಿಗೂ ಸಹ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ದೇವರ ಸನ್ನಿಧಿಯಲ್ಲಿ ಭಕ್ತರು ಹರಕೆ ಸಲ್ಲಿಸುವುದು ಸೇರಿದಂತೆ ಕೆಲ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಕೆಲವರು ದೇವಸ್ಥಾನದ ಆವರಣದಲ್ಲಿ ಕುಟುಂಬ ಸಮೇತರಾಗಿ ಸಹ ಭೋಜನ ಮಾಡುವ ದೃಶ್ಯ ಸಹ ಕಂಡು ಬಂದಿತು.


ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆಯಾಗದಂತೆ ಹಾಗೂ ಜನದಟ್ಟಣೆಯಾಗಂತೆ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ರಥ ಬೀದಿಯಲ್ಲಿ ವ್ಯಾಪಾರ ವಹಿವಾಟುಗಳು ಜೋರಾಗಿಯೇ ನಡೆಯಿತು.

“ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ವಾಹನಗಳನ್ನು ನಿಲ್ಲಿಸಲು ಶ್ರೀ ರೇಣುಕಾಂಬ ಕಲ್ಯಾಣ ಮಂದಿರದ ಆವರಣದಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರಿಗೆ ಕೊಳವೆಬಾವಿ ಮೂಲಕ ನೀರಿನ ಸೌಲಭ್ಯ ಒದಗಿಸಲಾಯಿತು. ಮುಖ್ಯವಾಗಿ ದೇವಸ್ಥಾನದ ಆವರಣದಲ್ಲಿ ಶೇಡ್ ನಿರ್ಮಾಣಕ್ಕಾಗಿ ಪುರಾತತ್ವ ಇಲಾಖೆಯಿಂದ ಅನುಮತಿಗಾಗಿ ಕೋರಲಾಗಿದೆ.”
– ವಿ.ಎಲ್. ಶಿವಪ್ರಸಾದ್, ದೇವಸ್ಥಾನದ ಆಡಳಿತಾಧಿಕಾರಿ.

Leave A Reply

Your email address will not be published.

error: Content is protected !!