ಸೊರಬ: ಚಂದ್ರಗುತ್ತಿ ಸಮೀಪದ ಚಿಕ್ಕಮಾಕೊಪ್ಪ ಗ್ರಾಮದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ಶ್ರೀ ದೇವರಿಗೆ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಮುಂಜಾನೆಯಿಂದಲೇ ಶೀ ರಾಮೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಾನಗಳೊಂದಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ ಮತ್ತು ಹೋಮ-ಹವನಗಳು ನಡೆದವು. ಧಾರ್ಮಿಕ ಪೂಜಾ ವಿಧಿ ವಿಧಾನಗಳ ನೇತೃತ್ವವನ್ನು ನಿರಂಜನ್ ಭಟ್ ಅರ್ಚಕ್ ವಹಿಸಿದರು.
ವಿಶೇಷವಾಗಿ ದೇವಸ್ಥಾನದ ಮುಂಭಾಗ ಬಣ್ಣ ಬಣ್ಣದ ಕೇಸರಿ ಧ್ವಜಗಳು ಮತ್ತು ಮಾವಿನ ಎಲೆಗಳ ತಳಿರು ತೋರಣ, ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಬಳಿಕ ಗ್ರಾಮದಲ್ಲಿ ಶ್ರೀ ರಾಮೇಶ್ವರ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳಗಳೊಂದಿಗೆ ವೈಭವದಿಂದ ಜರುಗಿತು. ಶ್ರೀ ರಾಮೇಶ್ವರ ಪಲ್ಲಕ್ಕಿ ಉತ್ಸವ ಮೆರವಣಿಗೆ ವೇಳೆ ಗ್ರಾಮದ ಭಕ್ತರು ಹಣ್ಣು ಕಾಯಿ ಪೂಜೆ ಸಲ್ಲಿಸಿ ಪುನೀತರಾದರು.
ನಂತರ ಶ್ರೀರಾಮೇಶ್ವರ ಸೇವಾ ಸಮಿತಿ ವತಿಯಿಂದ ಬಂದಂತಹ ಭಕ್ತರಿಗೆ ಅನ್ನದಾಸೋಹ ಸೇವೆ ಜೊತೆಗೆ ಕೋಸುಂಬರಿ, ಪಾನಕ, ಮಜ್ಜಿಗೆ, ವಿತರಿಸಲಾಯಿತು.
ಶ್ರೀ ರಾಮೇಶ್ವರ ಗೆಳೆಯರ ಬಳಗದವರು ಸುಮಾರು 30 ಅಡಿ ಎತ್ತರದ ಶ್ರೀ ರಾಮನ ಭಾವಚಿತ್ರವನ್ನು ಅಳವಡಿಸಿದ್ದು ಎಲ್ಲರ ಗಮನಸೆಳೆಯಿತು. ಚಂದ್ರಗುತ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.