ಚುನಾವಣಾ ಸ್ಪರ್ಧಾ ಕಣದಿಂದ ಹಿಂದೆ ಸರಿದ ‘ನಮೋ ವೇದಿಕೆ’

0 0


ಸೊರಬ: ವಿಧಾನಸಭಾ ಚುನಾವಣೆಯಲ್ಲಿ ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ, ಸ್ಪರ್ಧಾ ಕಣದಿಂದ ಹಿಂದೆ ಸರಿದಿರುವುದಾಗಿ ವೇದಿಕೆಯ ಅಧ್ಯಕ್ಷ ಪಾಣಿ ರಾಜಪ್ಪ ಸ್ಪಷ್ಟಪಡಿಸಿದರು.


ಪಟ್ಟಣದ ನಮೋವೇದಿಕೆ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಥಳೀಯ ಶಾಸಕರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೇಟ್ ನೀಡಬಾರದು ಎಂದು ವೇದಿಕೆಯು ಪಟ್ಟು ಹಿಡಿದಿತ್ತು. ಈ ಕುರಿತು ವೇದಿಕೆಯ ಕಾರ್ಯಕರ್ತರು ಸಮಾವೇಶ, ಬೈಕ್ ರ್‍ಯಾಲಿ ನಡೆಸಿ, ವರಿಷ್ಠರ ಗಮನಕ್ಕೂ ತರಲಾಗಿತ್ತು. ಆದರೆ, ಪಕ್ಷ ಪುನಃ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರಿಗೆ ಟಿಕೇಟ್ ನೀಡಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕುಮಾರ್ ಬಂಗಾರಪ್ಪ ಅವರಿಗೆ ಬೆಂಬಲ ಸೂಚಿಸುವುದಿಲ್ಲ ಎಂದರು.


ಇತ್ತೀಚೆಗೆ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಅವರು ನಮೋ ವೇದಿಕೆಯ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯಲಾಗಿದೆ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಆದರೆ, ಇದು ಅಸಾಧ್ಯವಾದ ಮಾತು. ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸುವುದೇ ನಮೋ ವೇದಿಕೆಯ ಉದ್ದೇಶ. ಇನ್ನೂ ಈ ಹಿಂದೆ ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು ಎಂದು ತಿಳಿಸಿದ್ದೆವು. ಆದರೆ, ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ, ಏ. ೨೪ರವರೆಗೆ ಕಾದು ನೋಡುತ್ತೇವೆ. ನಂತರ ವೇದಿಕೆಯ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.


ನಮೋ ವೇದಿಕೆಯವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎನ್ನುವ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು. ಆದರೆ, ವೇದಿಕೆ ಸ್ಪಷ್ಟ ನಿಲುವಿನೊಂದಿಗೆ ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರ ತಂಡವಾಗಿದೆ. ಕಾರ್ಯಕರ್ತರು ವಿಚಲಿತರಾಗಿಲ್ಲ, ದೃಢ ಸಂಕಲ್ಪ ಹೊಂದಿದ್ದಾರೆ. ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸುವುದೇ ಮುಖ್ಯ ಗುರಿಯಾಗಿದೆ ವಿನಃ, ಬೇರೆ ಪಕ್ಷವನ್ನು ಬೆಂಬಲಿಸುವುದಲ್ಲ. ವೇದಿಕೆಯ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ಕೆಲವರು ತೊಡಗುವ ಸಂಭವವಿದೆ. ಇವಕ್ಕೆ ಕಾರ್ಯಕರ್ತರು ಕಿವಿಗೊಡಬಾರದು ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ನಮೋ ವೇದಿಕೆಯ ಪ್ರಮುಖರಾದ ಎ.ಎಲ್. ಅರವಿಂದ್, ಗಜಾನನರಾವ್ ಉಳವಿ, ಅಶೋಕ್ ನಾಯ್ಕ್ ಅಂಡಿಗೆ, ಮಂಜಣ್ಣ ನೇರಲಗಿ, ಮಲ್ಲಿಕಾರ್ಜುನ ಗುತ್ತೇರ್, ಡಿ. ಶಿವಯೋಗಿ, ಅರುಣ್ ಪುಟ್ಟನಹಳ್ಳಿ, ಸಂಜೀವ್ ಆಚಾರ್, ಚಂದ್ರಪ್ಪ ಬರಗಿ, ದಯಾನಂದಗೌಡ, ಮೋಹನ್ ಹಿರೇಶಕುನ, ಸಂಜೀವ್ ಆಚಾರ್, ಮೋಹನ್ ಹಿರೇಶಕುನ, ಹರೀಶ್, ರಜನಿ ಸೇರಿದಂತೆ ಇತರರಿದ್ದರು.

Leave A Reply

Your email address will not be published.

error: Content is protected !!