ತಂತ್ರಜ್ಞಾನ ಮುಂದುವರೆದರೂ ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ | ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರದಲ್ಲಿ ಟಿಹೆಚ್‍ಒ ಡಾ. ಪ್ರಭು ಸಾಹುಕಾರ್ ಅಭಿಮತ
ಸೊರಬ : ಅಧುನಿಕತೆ ಮತ್ತು ತಂತ್ರಜ್ಞಾನ ಬಳಕೆಯಲ್ಲಿ ಎಷ್ಟೇ ಮುಂದುವರೆದರೂ ಸಹ ರಕ್ತಕ್ಕೆ ಪರ್ಯಾಯ ವಸ್ತು ಬಳಕೆ ಸಾಧ್ಯವಾಗಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭು ಸಾಹುಕಾರ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ಇಲಾಖೆ, ಆಯುಷ್ ಇಲಾಖೆ, ಸರ್ಕಾರಿ ನೌಕರರ ಸಂಘದ ವತಿಯಿಂದ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗಲಿದೆ. ತುರ್ತು ಸ್ಥಿತಿಯಲ್ಲಿರುವ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಇನ್ನು ದಾನ ಮಾಡಿದ ರಕ್ತವೂ ಅಲ್ಪಾವಧಿಯಲ್ಲಿ ಪುನರುತ್ಪತ್ತಿಯಾಗಲಿದೆ. ಮಾತ್ರವಲ್ಲದೆ ವ್ಯಕ್ತಿಯು ಕ್ರಿಯಾಶೀಲರಾಗುತ್ತಾರೆ. ರಕ್ತದಾನ ಮಾಡುವುದರಿಂದ ಇರುವ ಮೂಢ ನಂಬಿಕೆಗಳಿಂದ ಹೊರಬಂದು ರಕ್ತದಾನದಲ್ಲಿ ಪಾಲ್ಗೊಳ್ಳಬೇಕು ಎಂದ ಅವರು, ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ವಿವಿಧ ಇಲಾಖೆಯ ನೌಕರರು ಮತ್ತು ವಿವಿಧ ಸಂಘ-ಸಂಸ್ಥೆಯವರು ಸ್ವಯಂ ಪ್ರೇರಿತರಾಗಿ ಆಗಮಿಸುತ್ತಿದ್ದಾರೆ. ನಿರೀಕ್ಷೆಯನ್ನೂ ಮೀರಿದ ಸ್ಪಂದನೆ ದೊರೆತಿರುವುದು ಸಂತಸ ತಂದಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಜನಿ, ಮಹಿಳೆಯರು ರಕ್ತದಾನದ ಬಗೆಗೆ ಇರುವ ಗೊಂದಲಗಳಿಂದ ಹೊರಬರಬೇಕು. ಹೆರಿಗೆ, ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಮಹಿಳೆಯರಿಗೆ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಆರೋಗ್ಯವಂತ ಮಹಿಳೆಯರು ಸ್ವಯಂ ಪ್ರೇರಿತರಾಗಿ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಮತ್ತೊಬ್ಬರಿಗೆ ಸಹಾಯ ಮಾಡಿದ ಪುಣ್ಯ ಲಭಿಸುತ್ತದೆ ಎಂದರು.

ಮಧ್ಯಾಹ್ನದ ವರೆಗೆ ಶಿವಮೊಗ್ಗದ ಮೆಗ್ಗಾನ್ ರಕ್ತನಿಧಿಗೆ ಸುಮಾರು 130 ಯುನಿಟ್ ರಕ್ತದಾನ ಮಾಡಲಾಯಿತು. ಇದಕ್ಕೂ ಮೊದಲು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್, ಆಯುಷ್ ವೈದ್ಯಾಧಿಕಾರಿ ಡಾ. ಮಹೇಶ್ ಮುಕ್ರಿ, ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ. ಸಚಿನ್, ಡಾ. ನದಾಫ್, ಡಾ. ರಮ್ಯಾ, ಡಾ. ಮೇದಿನಿ, ಡಾ. ದಿವ್ಯಾ, ಸೊರಬ ಪೊಲೀಸ್ ವೃತ್ತ ನಿರೀಕ್ಷಕ ಎಲ್. ರಾಜಶೇಖರ್, ಪಿಎಸ್‍ಐಗಳಾದ ಎಚ್.ಎನ್. ನಾಗರಾಜ್, ಮಾಳಪ್ಪ ಚಿಪ್ಪಲಕಟ್ಟಿ, ವಲಯ ಅರಣ್ಯಾಧಿಕಾರಿ ಜಾವೆದ್ ಪಾಷಾ ಅಂಗಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ಶಾಖೆ ಅಧ್ಯಕ್ಷ ಜೆ.ಎಸ್. ನಾಗರಾಜ ಜೈನ್, ಪುರಸಭೆ ಸದಸ್ಯರಾದ ವೀರೇಶ್ ಮೇಸ್ತ್ರಿ, ಎಂ.ಡಿ. ಉಮೇಶ್, ಶ್ರೀರಂಜನಿ ಪ್ರವೀಣ್ ಕುಮಾರ್, ಆಫ್ರೀನಾ, ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ, ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ಜೆಸಿಐ ಸಂಸ್ಥೆಯ ಡಿ.ಎಸ್. ಪ್ರಶಾಂತ್ ದೊಡ್ಮನೆ, ಪ್ರಮುಖರಾದ ಎಂ.ಎಸ್. ಕಾಳಿಂಗರಾಜ್, ನಾಗರಾಜ ಗುತ್ತಿ, ಶಂಕರ್ ಶೇಟ್, ರಾಜು ಹಿರಿಯಾವಲಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ನೌಕರರು ಉಪಸ್ಥಿತರರಿದ್ದರು.