ಸೊರಬ: ‘ಪತ್ನಿ ಗೀತಾ ಮಾತ್ರ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ನನಗೆ ರಾಜಕೀಯ ಗೊತ್ತಿಲ್ಲ. ಹೀಗಾಗಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿಲ್ಲ. ಒಳ್ಳೆಯ ಕೆಲಸ ಮಾಡುವವರು ಎಲ್ಲ ಪಕ್ಷದಲ್ಲೂ ನನ್ನ ಗೆಳೆಯರಿದ್ದಾರೆ. ಅವರ ಪರ ಕಾಳಜಿಯಿಂದ ಮಾತ್ರ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದೇನೆ’ ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.
ಆನವಟ್ಟಿ ಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿರಂತರವಾಗಿ ಚಿತ್ರೀಕರಣ ಇರುವುದರಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳಲು ಅವಕಾಶ ಸಿಗುವುದಿಲ್ಲ. ಕೇವಲ ಪ್ರಚಾರದಲ್ಲಿ ತೊಡಗಿಕೊಳ್ಳಲು ಮಾತ್ರ ಸೀಮಿತಗೊಂಡಿರುವೆ’ ಎಂದರು.
‘ಬಾಮೈದ ಮಧು ಬಂಗಾರಪ್ಪ, ಆತ್ಮೀಯರಾದ ಸಿದ್ದರಾಮಯ್ಯ, ಶಿರಸಿಯ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯಕ್, ಜಗದೀಶ್ ಶೆಟ್ಟರ್, ವಿಜಯ್‌ಸಿಂಗ್, ಅಶೋಕ ಖೇಣಿ ಪರವೂ ಪ್ರಚಾರಕ್ಕೆ ತೆರಳುವೆ’ ಎಂದರು.
‘ಜಗದೀಶ ಶೆಟ್ಟರ್ ಅಪ್ಪಾಜಿಯ ದೊಡ್ಡ ಅಭಿಮಾನಿ. ಅವರ ಕುಟುಂಬದವರು ನನ್ನನ್ನು ಹಾಗೂ ಅಪ್ಪುವನ್ನು ಬಹಳ ಗೌರವಿಸುತ್ತಿದ್ದರು. ಶೆಟ್ಟರ್ ಯಾವುದೇ ಪಕ್ಷದಲ್ಲಿದ್ದರೂ ಹುಬ್ಬಳ್ಳಿಯಲ್ಲಿ ಶೂಟಿಂಗ್ ಇದ್ದರೆ ಉಪಾಹಾರಕ್ಕೆ ಅವರ ಮನೆಗೇ ಹೋಗುತ್ತಿದ್ದೆವು. ಶೆಟ್ಟರ್ ಪರ ಪ್ರಚಾರಕ್ಕೆ ಹೋಗುತ್ತೇನೆ’ ಎಂದರು.
‘ನಟ ಸುದೀಪ್ ಪ್ರಚಾರದಲ್ಲಿ ಭಾಗವಹಿಸಿದ್ದನ್ನೂ ನಾನು ಪ್ರಚಾರಕ್ಕೆ ಬಂದಿರುವುದನ್ನು ಹೋಲಿಕೆ ಮಾಡುವುದು ಸರಿಯಲ್ಲ. ಅವರಿಗೆ ಸರಿ ಅನಿಸಿದ್ದನ್ನು ಅವರು ಮಾಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದಕ್ಕೂ ಮುನ್ನ ಶಿವರಾಜ್‌ಕುಮಾರ್ ಅವರು ಮಧು ಬಂಗಾರಪ್ಪ ಪರ ರೋಡ್ ಶೋ ನಡೆಸಿದರು.