ಸೊರಬ: ಕಾಂಗ್ರೆಸ್ ಪಕ್ಷದಿಂದ ಏ.30 ರಂದು ಮಧ್ಯಾಹ್ನ 1ಕ್ಕೆ ವಿಧಾನಸಭಾ ಚುನಾವಣಾ ಪ್ರಚಾರ ಸಭೆ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಟ ಡಾ. ಶಿವರಾಜ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಎಐಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ ಹೇಳಿದರು.
ಆನವಟ್ಟಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ವಿಠ್ಠಲ ದೇವಸ್ಥಾನದಿಂದ ಮುಖ್ಯ ರಸ್ತೆ ಮಾರ್ಗವಾಗಿ ಸಮಾವೇಶ ನಡೆಯುವ ಸ್ಥಳದವರೆಗೆ ಬೃಹತ್ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಚಲನಚಿತ್ರ ನಟರು ಹಾಗೂ ಸಂಬಂಧಿಯಾಗಿರುವ ಡಾ. ಶಿವರಾಜ್ ಕುಮಾರ್ ಅವರು ತಮಗೆ ಹಾಗೂ ನೆರೆಯ ಶಿರಸಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಅವರೇ ಸ್ವಯಂ ಪ್ರೇರಿತರಾಗಿ ಘೋಷಣೆ ಮಾಡಿದ್ದಾರೆ. ಸಹೋದರಿ ಗೀತಾ ಶಿವರಾಜ್ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ರಾಜ್ಯದ ವಿವಿಧಡೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವರು. ತಾಲೂಕಿನ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿನಂತಿಸಿದರು.