ಬಿಜೆಪಿಗೆ ಮತ ನೀಡದಂತೆ ರೈತ ಸಂಘ ನಿರ್ಧಾರ


ಸೊರಬ: ಜನ ವಿರೋಧಿ, ರೈತ ವಿರೋಧಿ ಧೋರಣೆ ಹೊಂದಿರುವ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರೈತ ಸಂಘದ ತೀರ್ಮಾನದಂತೆ ಬಿಜೆಪಿ ಪಕ್ಷಕ್ಕೆ ಮತ ನೀಡದಿರಲು ತೀರ್ಮಾನ ಕೈಗೊಂಡಿರುವುದಾಗಿ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕ ಉಮೇಶ್ ಪಾಟೀಲ್ ಹೇಳಿದರು.


ಬುಧವಾರ ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ, ಭೂಸುಧಾರಣೆ, ವಿದ್ಯುತ್ ಖಾಸಗೀಕರಣಗಳನ್ನು ರೈತರ ಸತತ 13 ತಿಂಗಳ ಹೋರಾಟದ ಫಲವಾಗಿ ಕೇಂದ್ರ ವಾಪಾಸ್ ಪಡೆಯಿತು. ಆದರೆ, ರಾಜ್ಯದಲ್ಲಿ ಈವರೆಗೂ ಬಿಜೆಪಿ ಸರ್ಕಾರ ವಾಪಾಸ್ ಪಡೆದಿಲ್ಲ. ರೈತರನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.


ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ 10 ಎಚ್‌ಪಿ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದ್ದರು. ಆದರೆ, ಈಗಿನ ಸರ್ಕಾರ ವಿದ್ಯುತ್ ಖಾಸಗೀಕರಣಗೊಳಿಸಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ನಡೆಸುತ್ತಿದೆ. ಎಪಿಎಂಸಿ ಕಾಯ್ದೆಯು ರೈತರಿಗೆ ಮಾರಕವಾಗಿದೆ. ಕಾರ್ಪೋರೇಟ್ ಸಂಸ್ಥೆಗಳಿಗೆ ಮಣೆ ಹಾಕುವುದಾಗಿದೆ. ಇದಲ್ಲದೇ ಕೆಎಂಎಫ್ ಜೊತೆ ಅಮುಲ್ ಡೈರಿ ಸೇರಿಸುವುದಕ್ಕೆ ರೈತ ಸಂಘ ತೀವ್ರವಾಗಿ ವಿರೋಧಿಸುತ್ತದೆ. ಈ ನಡುವೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಗತ್ಯ ವಸ್ತುಗಳು ಮತ್ತು ಕೃಷಿ ಉಪಕರಣಗಳು, ರಸಗೊಬ್ಬರ ಇತ್ಯಾದಿ ವಸ್ತುಗಳ ಬೆಲೆ ಏರಿಕೆಯಾಗಿದೆ ಇದರಿಂದ ಜನತೆಗೆ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಪರವಾದ ರೈತರ ಪರವಾದ ಯೋಜನೆಗಳನ್ನು ಜಾರಿಗೆ ತರುವ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ರಾಜ್ಯ ಸಂಘದ ನಿರ್ದೇಶನದಂತೆ ಬೆಂಬಲ ಸೂಚಿಸಲಾಗುವುದು ಎಂದರು.


ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ವಿರುದ್ಧ ಹಲವು ಆರೋಪಗಳಿದ್ದರೂ ಸಹ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈಗಾಗಲೇ ಅವರ ಮೇಲೆ ಹಳೇ ತಾಲೂಕು ಕಚೇರಿಯ ಹಳೇ ನಾಟಾ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾವಾರು ವಿಚಾರಣೆ ನಡೆಯುತ್ತಿದೆ. ಮತ್ತೊಂದಡೆ ಪುರಸಭೆಯಲ್ಲಿ ಪೌರ ಕಾರ್ಮಿಕ ಮಹಿಳೆಯೊಬ್ಬರನ್ನು ಖಾತೆ ಬದಲಾವಣೆ ವಿಷಯ ನಿರ್ವಾಹಕಿ ಹುದ್ದೆಗೆ ನಿಯೋಜಿಸಿ, ಖಾತೆಯ ದಾಖಲೆಗಳನ್ನು ತಿದ್ದುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಪುರಸಭೆ ಸದಸ್ಯರೊಬ್ಬರು ಶಾಮೀಲಾಗಿದ್ದಾರೆ. ಕೂಡಲೇ ಪೌರ ಕಾರ್ಮಿಕರನ್ನು ಅನ್ಯ ಕರ್ತವ್ಯಕ್ಕೆ ನಿಯೋಜಿಸಿರುವುದು ಸಲ್ಲದು, ಇದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಆದೇಶವನ್ನು ಉಲ್ಲಂಘಿಸಿದಂತಾಗಿದೆ. ಪುರಸಭೆ ಮುಖ್ಯಾಧಿಕಾರಿ ವಿರುದ್ಧದ ಆರೋಪದ ತನಿಖೆಯನ್ನು ಚುರುಕುಗೊಳಿಸಬೇಕು ಎಂದು ರೈತ ಸಂಘದ ಉಮೇಶ್ ಪಾಟೀಲ್ ಆಗ್ರಹಿಸಿದರು.


ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಶಫೀವುಲ್ಲಾ, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ರೈತ ಮುಖಂಡರಾದ ಚಿತ್ರಶೇಖರಪ್ಪ ಗೌಡ, ಹನುಮಂತಪ್ಪ ಬಾವಿಕಟ್ಟಿ, ಕೆ. ಹುಚ್ಚಪ್ಪ ಉಳವಿ, ಸತೀಶ್ ನಾಯ್ಕ್, ಲೋಕಪ್ಪ, ಪ್ರಕಾಶ್, ವೀರೇಶ್ ಮಾವಲಿ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Articles

error: Content is protected !!