ಸಾಮಾಜಿಕ ಸದುದ್ಧೇಶಕ್ಕಾಗಿ ಚಲನಚಿತ್ರಗಳ ನಿರ್ಮಾಣ ನಮ್ಮ ಗುರಿ

0 2

ಸೊರಬ: ಬೆಳ್ಳಿ ಪರದೆ ಅತಿ ವೇಗವಾಗಿ, ತೀಕ್ಷ್ಣವಾಗಿ ಗರಿಷ್ಠ ಜನರಿಗೆ ಶಿಕ್ಷಣ ನೀಡುವಲ್ಲಿ ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಸದುದ್ಧೇಶಕ್ಕಾಗಿ ಚಲನಚಿತ್ರಗಳ ನಿರ್ಮಾಣ ನಮ್ಮ ಗುರಿ ಎಂದು ರಾಷ್ಟ್ರ ಪ್ರಶಸ್ತಿ ಚಲನಚಿತ್ರ ಹೂಮಳೆ ನಿರ್ಮಾಪಕ ನಡಹಳ್ಳಿ ಶ್ರೀಪಾದರಾವ್ ಹೇಳಿದರು.


ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರೇಕ್ಷಕರೆ ವಿತರಕರು ಎಂಬ ಹೊಸ ತತ್ವ ಸಿದ್ಧಾಂತದಲ್ಲಿ ಲಯನ್ಸ್, ರೋಟರಿ, ಜೇಸೀಸ್ ಸಹಯೋಗದೊಂದಿಗೆ ನೇತ್ರದಾನ ಮಹಾದಾನ ಎಂಬ ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಮ್ಮ ಮುಂದಿನ ಚಿತ್ರ ಅಂತ್ಯವಲ್ಲ ಆರಂಭ ಬಿಡುಗಡೆಗೆ ಈ ಕಿರು ಚಿತ್ರ ಒಂದು ಮಾದರಿ. ಜೊತೆಗೆ ನೇತ್ರದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯದ ವಿಭಿನ್ನ ರೀತಿಯ ಪ್ರಯತ್ನವಿದು ಎಂದರು.


ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗೌವರ್ನರ್ ಎಚ್.ಎಸ್. ಮಂಜಪ್ಪ ಮಾತನಾಡಿ, ಸಮಾಜದ ಮೌಢ್ಯಗಳ ನಿವಾರಣೆಯಲ್ಲಿ ಶ್ರೀಪಾದರ ಸೇವೆ, ಸಾಧನೆ ಗುರುತರವಾಗಿದ್ದು, ವಿಧವಾ ವಿವಾಹದಂತಹ ಔಚಿತ್ಯ ಚಟುವಟಿಕೆಗಳನ್ನು ಪ್ರತ್ಯಕ್ಷ ತೋರಿಸಿಕೊಟ್ಟವರು ಎಂಬ ಹೆಮ್ಮೆ ನಮಗಿದೆ ಎಂದರು.


ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ.ಎಂ.ಕೆ.ಭಟ್ ಮಾತನಾಡಿ, ಸ್ಥಳೀಯ ಕಲಾವಿದರನ್ನು ಈ ಕಿರು ಚಿತ್ರಕ್ಕೆ ಬಳಸಿಕೊಳ್ಳುವ ಮೂಲಕ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಶ್ರೀಪಾದರ ಇಂತಹ ಸದಭಿರುಚಿಯ ಕಾರ್ಯಕ್ರಮಕ್ಕೆ ಸದಾ ಸಹಕಾರ ಇರುತ್ತದೆ ಎಂದರು.
ಸೊರಬ ರೋಟರಿ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಇ. ಜ್ಞಾನೇಶ್, ಇಲ್ಲಿನ ಮಿಂಚಿಹೋಗುವ ಒಂದು ದೃಶ್ಯವೆ ಕಣ್ಣುದಾನದ ಮಹತ್ವವನ್ನು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಸಿದೆ. ಇಂತದ್ದೆಲ್ಲ ಕೃತಿಯಾಗಬೇಕು. ಕೇವಲ ಮಾತಿಗೆ ಸೀಮಿತವಾಗಿರಬಾರದು ಎಂದ ಅವರು, ವಿಧವಾ ವಿವಾಹ ಪ್ರೇರಕರಾದ ಶ್ರೀಪಾದರಾವ್ ಅವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.


ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭು ಕೆ. ಸಾಹುಕಾರ್, ಕಿರಿದಾದ ಅವಧಿಯಲ್ಲಿ ಔಚಿತ್ಯಪೂರ್ಣ ವಿಚಾರವನ್ನು ಸ್ಪಷ್ಟ ಮತ್ತು ಅರ್ಥವತ್ತಾಗಿ ಮೂಡಿಸಿದ್ದು, ನೇತ್ರದಾನದ ಕುರಿತು ಜಾಗೃತಿ ಮೂಡಿಸುವಲ್ಲಿ ನಿರ್ದೇಶಕರು ಗೆಲುವು ಸಾಧಿಸಿದ್ದಾರೆ ಎಂದರು.
ಕಿರುಚಿತ್ರದ ಕಲಾವಿದ ಕೃಷ್ಣಾನಂದ್, ಹಾಲೇಶ್ ನವುಲೆ, ಮೋಹನ್ ಸುರಭಿ, ಹೇಮಂತ್, ಪ್ರಣವ್ ಅವರಿಗೆ ಪ್ರಶಂಸಾ ಪತ್ರ ನೀಡಲಾಯಿತು.


ರೋಟರಿ ಅಧ್ಯಕ್ಷ ಡಾ.ನಾಗರಾಜ್, ನಿವೃತ್ತ ಮುಖ್ಯಶಿಕ್ಷಕ ರಾಜಪ್ಪ ಮಾಸ್ತರ್, ಜೇಸಿಐ ಸಂಸ್ಥೆಯ ಡಿ.ಎಸ್. ಪ್ರಶಾಂತ್ ದೊಡ್ಮನೆ, ಪ್ರಮುಖರಾದ ಪಾಣಿ ರಾಜಪ್ಪ, ಸವಿತಾ ಎಂ.ಕೆ. ಭಟ್, ಎಚ್.ಎಂ. ಪ್ರತಿಮಾ, ಡಾ. ಉಮೇಶ್ ಭದ್ರಾಪುರ, ಚಿತ್ರ ಕಲಾವಿದರು, ತಂತ್ರಜ್ಞರು ಮತ್ತಿತರರಿದ್ದರು.

Leave A Reply

Your email address will not be published.

error: Content is protected !!