ಹೃದಯಾಘಾತ ; ಕೆರೆ ಬೇಟೆಗೆ ತೆರಳಿದ್ದ ವ್ಯಕ್ತಿ ಸಾವು !
ಸೊರಬ : ತಾಲೂಕಿನ ಉರುಗನಹಳ್ಳಿ ಬಳಿಯ ದೇವತಿಕೊಪ್ಪ ಕೆರೆ ಬೇಟೆಗಾಗಿ ತೆರಳಿದ್ದಂತ ವ್ಯಕ್ತಿಯೊಬ್ಬರು ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಭಾನುವಾರ ಸೊರಬ ಸಮೀಪದ ಉರಗನಹಳ್ಳಿಯ ದೇವತಿಕೊಪ್ಪ ಕೆರೆಯಲ್ಲಿ ಕೆರೆಬೇಟೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕೆರೆಬೇಟೆಗೆ ಹರಿಗೆಯ ಮಲ್ಲೇಶಪ್ಪ (60) ಎಂಬುವರು ಕೂಡ ತೆರಳಿದ್ದರು. ಹೀಗೆ ತೆರಳಿದ್ದಂತ ಮಹೇಶಪ್ಪ ಅವರು ದಿಢೀರ್ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಸೊರಬ ತಾಲೂಕು ವೈದ್ಯಾಧಿಕಾರಿ ಡಾ.ಪ್ರಭು ಸಾಹುಕಾರ್, ಇಂದು ಮಧ್ಯಾಹ್ನ 12.20ರ ಸುಮಾರಿಗೆ ತಾಲೂಕು ಆಸ್ಪತ್ರೆಗೆ ಮಲ್ಲೇಶಪ್ಪ ಕರೆತರಲಾಗಿತ್ತು. ಅವರನ್ನು ಪರೀಕ್ಷಿಸಿದಾಗ ಸಾವನ್ನಪ್ಪಿದ್ದರು. ಶವ ಪರೀಕ್ಷೆ ಮಾಡಿ ಎಂಬುದಾಗಿ ಸಂಬಂಧಿಕರು ತಿಳಿಸಿದಾಗ, ದೂರು ನೀಡಿದ ಬಳಿಕ ಮಾಡುವುದಾಗಿ ತಿಳಿಸಲಾಗಿತ್ತು. ಆದರೆ ಅವರು ಮೃತದೇಹವನ್ನು ತೆಗೆದುಕೊಂಡು ಬರಲಿಲ್ಲ ಎಂದು ತಿಳಿಸಿದ್ದಾರೆ.
ಮಹೇಶಪ್ಪ ಯಾವ ಕಾರಣಕ್ಕೆ ನಿಧನರಾಗಿದ್ದಾರೆ ಎಂಬುದು ಗೊತ್ತಿಲ್ಲ. ಯಾಕೆಂದರೆ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿಲ್ಲ. ಹೀಗಾಗಿ ಹೇಗೆ ಸಾವನ್ನಪ್ಪಿದ್ದಾರೆ ಎಂಬುದನ್ನು ಹೇಳಲಾಗದು ಎಂಬುದಾಗಿ ತಿಳಿಸಿದ್ದಾರೆ.