ಸಡಗರ ಸಂಭ್ರಮದಿಂದ ನೆರವೇರಿದ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ

0 114

ಸೊರಬ: ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಯುವಕ ಸಂಘ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಏರ್ಪಡಿಸಿದ್ದ ಜನಪದ ಕ್ರೀಡೆ ಸಾಂಪ್ರಾದಾಯಿಕ ಹೋರಿ ಬೆದರಿಸುವ ಹಬ್ಬ ಸಡಗರ ಸಂಭ್ರಮದಿಂದ ಬುಧವಾರ ನಡೆಯಿತು.


ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಹಬ್ಬಕ್ಕೆ ಮಹತ್ವವಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ಸಾವಿರಾರು ಪ್ರೇಕ್ಷಕರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾರ ಕೈಗೆ ಸಿಲುಕದಂತೆ ಹೋರಿಗಳು ಓಡುವ ದೃಶ್ಯ ನೋಡುಗರ ಮೈನವಿರೇಳಿಸಿತು. ಹೋರಿ ಮಾಲಿಕರು ತಮ್ಮ ನೆಚ್ಚಿನ ಹೋರಿಗಳನ್ನು ಬಗೆಬಗೆಯ ಜೂಲ, ಬಲೂನ್, ರಿಬ್ಬನ್, ಒಣಕೊಬ್ಬರಿ ಕಟ್ಟಿ ಸಿಂಗರಿಸಿದ್ದರು. ತೇರಿನಂತೆ ಸಿಂಗಾರಗೊಂಡ ಪೀಪಿ ಹೋರಿಗಳು ಅಖಾಡದಲ್ಲಿ ಓಡಿ ಬರುತ್ತಿದ್ದಂತೆ ಪ್ರೇಕ್ಷಕರ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿ ಬಂದಿತು. ಪೈಲ್ವಾನರು ಹೋರಿಗಳನ್ನು ಹಿಡಿದು ಬಲ ಪ್ರದರ್ಶನ ಮಾಡಿದರು.


ಕರೆಕ್ಯಾತನಹಳ್ಳಿ ಯಜಮಾನ, ಹರೂರು ಗೂಳಿ, ಉದ್ರಿ ಡಾನ್, ಮನ್ಮನೆಯ ಅಧೀರ, ಯಲವಳ್ಳಿಯ ಗೂಳಿ, ಕೊಲೆಗಾರ, ತಾಳಗುಂದ ಅರ್ಜುನ, ಕೊಡಕಣಿ ಕದಂಬ, ಕೊಡಕಣಿ ರಾಯನ್, ಶಾಂತಗೇರಿ ಡೇಜರ್ ಮುತ್ತು, ಬನವಾಸಿಯ ಕದಂಬ, ಶಿಕಾರಿಪುರ ಹೋಯ್ಸಳ, ಕಡೆನಂದಿಹಳ್ಳಿ ನಾಯಕರ ಹುಲಿ, ತಾವರೆಕೊಪ್ಪದ ಪೈಲ್ವಾನ, ಶಿಗ್ಗಾದ ಮೆಜೆಸ್ಟಿಕ್ ಹುಲಿ, ಅಂಡಿಗೆ ಆರ್‌ಎಂಡಿ ಕಿಂಗ್, ಶಿಕಾರಿಪುರ ವಾರಸ್ದಾರ, ಗದ್ದೆಮನೆ ಹುಲಿ, ಚಂದ್ರಗುತ್ತಿಯ ಚಂದ್ರಗುತ್ಯಮ್ಮ ಮತ್ತು ಬೆಳ್ಳಿ ಕುದುರೆ ಸೇರಿದಂತೆ ಜನಪದ ಸಂಸ್ಕೃತಿಯ ಪ್ರತೀಕವಾದ ಹಬ್ಬದಲ್ಲಿ ಸುಮಾರು ಎರಡನೂರು ವಿವಿಧ ಹೆಸರಿನ ಹೋರಿಗಳು ಅಕಾಡದಲ್ಲಿ ಓಡಿದವು.


ಸಮಿತಿಯ ವತಿಯಿಂದ ಸುರಕ್ಷತೆ ಹೆಚ್ಚಿನ ಗಮನ ನೀಡಲಾಗಿತ್ತು. ಅಖಾಡದ ಎರಡು ಬದಿಯಲ್ಲಿ ಬೇಲಿಯನ್ನು ನಿರ್ಮಿಸಲಾಗಿತ್ತು. ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಲಾಯಿತು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಮತ್ತು ಬಲ ಪ್ರದರ್ಶನ ಮಾಡಿದ ಪೈಲ್ವಾನರನ್ನು ಗುರುತಿಸಲಾಯಿತು.

Leave A Reply

Your email address will not be published.

error: Content is protected !!