ಸೊರಬ ಚುನಾವಣಾ ಕಣಕ್ಕೆ ಪ್ರಸನ್ನಕುಮಾರ್ ಸಮನವಳ್ಳಿ ಎಂಟ್ರಿ !

0 51


ಸೊರಬ: ವಿಧಾನಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಸೊರಬ ವಿಧಾನಸಭಾ ಕ್ಷೇತ್ರ ರಂಗೇರಿದೆ. ಇದುವರೆಗೆ ಸೊರಬದಲ್ಲಿ ಸಹೋದರರ ಸವಾಲ್ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ ಇದೀಗ ಚುನಾವಣಾ ಕಣಕ್ಕೆ ಉದ್ಯಮಿ ಹಾಗೂ ಸಮಾಜ ಸೇವಕ ಪ್ರಸನ್ನಕುಮಾರ್ ಧುಮುಕಿದ್ದಾರೆ. ಇದರಿಂದಾಗಿ ಸೊರಬ ಕ್ಷೇತ್ರದ ಚುನಾವಣಾ ಕಣ ಇನ್ನಷ್ಟು ರಂಗೇರಿದೆ.


ಕಾಂಗ್ರೆಸ್‌ನಿಂದ ಮಧು ಬಂಗಾರಪ್ಪ ಹಾಗೂ ಬಿಜೆಪಿಯಿಂದ ಕುಮಾರ್ ಬಂಗಾರಪ್ಪ ಕಣಕ್ಕಿಳಿಯುತ್ತಿದ್ದು, ಹೀಗಾಗಿ ಸೊರಬದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಪ್ರಸನ್ನಕುಮಾರ್ ಸಮನವಳ್ಳಿ ಜೆಡಿಎಸ್ ನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಸಹೋದರರ ಸವಾಲ್ ನಡುವೆ ಪ್ರಸನ್ನ ಕುಮಾರ್ ಸಹ ಗೆಲುವಿಗಾಗಿ ಶತಾಯಗತಾಶ ಪ್ರಯತ್ನ ಆರಂಭಿಸಿದ್ದಾರೆ.


ಚುನಾವಣಾ ರಾಜಕಾರಣ ಹೊರತುಪಡಿಸಿ ಕೆಲ ವರ್ಷಗಳಿಂದಲೇ ಸೊರಬದಲ್ಲಿ ಸಕ್ರಿಯರಾಗಿರುವ ಪ್ರಸನ್ನಕುಮಾರ್ ಸಮನವಳ್ಳಿಯವರು ಹತ್ತಾರು ಸಮಾಜ ಮುಖಿ ಕೆಲಸಗಳನ್ನು ಮಾಡುವ ಮೂಲಕ ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಇದ್ದಲ್ಲದೆ ಕ್ಷೇತ್ರವ್ಯಾಪ್ತಿಯ ಹತ್ತು ಹಲವು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಜನಮನಗೆದ್ದಿದ್ದಾರೆ. ಇದರ ಜೊತೆಗೆ ಜೆಡಿಎಸ್ ನ ಸಾಂಪ್ರದಾಯಿಕ ಮತಗಳೂ ಸೇರ್ಪಡೆಯಾಗಲಿವೆ. ಇದೀಗ ಪ್ರಸನ್ನಕುಮಾರ್ ಸಮನವಳ್ಳಿಯವರ ಎಂಟ್ರಿಯಿಂದಾಗಿ ಎರಡು ಪಕ್ಷಗಳಿಗೂ ಆತಂಕ ಎದುರಾಗಿದೆ.


ಈಗಾಗಲೇ ನಮೋ ವೇದಿಕೆಯಿಂದಾಗಿ ಶಾಸಕ ಕುಮಾರ್ ಬಂಗಾರಪ್ಪ ಸಂಕಟಕ್ಕೆ ಸಿಲುಕಿದ್ದಾರೆ. ಇನ್ನು ಮಧು ಬಂಗಾರಪ್ಪ ವಿರೋಧಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಮಧ್ಯೆ ಪ್ರಸನ್ನಕುಮಾರ್ ಸಮನವಳ್ಳಿಯವರ ಎಂಟ್ರಿಯಿಂದಾಗಿ ಈ ಇಬ್ಬರು ನಾಯಕರ ವಿರೋಧಿ ಮತಗಳು ಪ್ರಸನ್ನಕುಮಾರ್ ಸೆಳೆಯುವ ಸಾಧ್ಯತೆಯಿದೆ. ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಸಂಪಾದಿಸಿರುವ ಜನರ ಮತಗಳು, ಜೆಡಿಎಸ್ ನ ಸಾಂಪ್ರದಾಯಿಕ ಮತಗಳ ಜೊತೆಗೆ ಸಹೋದರರ ವಿರೋಧಿ ಮತಗಳ ಕ್ರೋಡಿಕರಣದಿಂದಾಗಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಸನ್ನಕುಮಾರ್ ಸಮನವಳ್ಳಿ ಸವಾಲೊಡ್ಡುವ ಸಾಧ್ಯತೆಯಿದೆ.

Leave A Reply

Your email address will not be published.

error: Content is protected !!