ತೀರ್ಥಹಳ್ಳಿ : ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ತೀರ್ಥಹಳ್ಳಿ ಕ್ಷೇತ್ರ ಈ ಭಾರಿ ರೋಚಕತೆಯಿಂದ ಕೂಡಿರಲಿದೆ. ಪ್ರತಿ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮದ್ಯೆ ಪೈಪೋಟಿ ಸಾಮಾನ್ಯವಾಗಿದ್ದು ಈ ಬಾರಿ ಮತ್ತಷ್ಟು ರೋಚಕತೆಯಿಂದ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.
ಕಿಮ್ಮನೆ ರತ್ನಾಕರ್ ಅವರಿಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಆರ್.ಎಂ ಮಂಜುನಾಥ ಗೌಡರು ತಮ್ಮ ಬೆಂಬಲಿಗರೊಂದಿಗೆ ಆಯನೂರು ಸಮೀಪದ ಕರಕೂಚಿ ಮತ್ತು ತಮ್ಮ ತೀರ್ಥಹಳ್ಳಿ ಬೆಟ್ಟಮಕ್ಕಿ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದ ಕಾರಣ ಬಂಡಾಯ ಎಳುತ್ತಾರೆ ಎಂಬ ಮಾತು ಸಾರ್ವಜನಿಕವಾಗಿ ಕಾರ್ಯಕರ್ತರಲ್ಲಿ ಚರ್ಚೆಯಲ್ಲಿತ್ತು. ಆದರೆ ಕಿಮ್ಮನೆ ರತ್ನಾಕರ್ ಅವರೇ ಶನಿವಾರ ಸಂಜೆ ಮಂಜುನಾಥ್ ಗೌಡರ ಮನೆಗೆ ದಿಢೀರ್ ಭೇಟಿ ನೀಡಿ ಆರ್ ಎಂ ಎಂ ಜೊತೆ ಮಾತನಾಡಿ ಎಲ್ಲಾ ವೈಮನಸ್ಸು ಉಪಶಮನ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಏ.12 ರಿಂದ ಸಭೆಗಳಿಗೆ ಇಬ್ಬರು ಒಟ್ಟಾಗಿ ಹೊಗಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಕೊನೆಗೂ ಜೋಡೆತ್ತುಗಳು ಒಟ್ಟಿಗೆ ಅಖಾಡಕ್ಕಿಳಿಯುವುದಕ್ಕೆ ಸಮಯ ನಿಗದಿಯಾಗಿದೆ. ಈ ಕಾರಣದಿಂದ ಎದುರಾಳಿಗಳಿಗೆ ಢವಢವ ಶುರುವಾಗುತ್ತಾ ಅಥವಾ ಎದುರಾಳಿಗಳು ಎದ್ದು ನಿಲ್ತಾರಾ ಕಾದು ನೋಡಬೇಕಿದೆ.