ತೀರ್ಥಹಳ್ಳಿ/ಕಡೂರು : ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ 124 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದ ಕಾಂಗ್ರೆಸ್ ಪಕ್ಷ ಇಂದು 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನಿರೀಕ್ಷೆಯಂತೆ ತೀರ್ಥಹಳ್ಳಿ ಕ್ಷೇತ್ರದ ಟಿಕೆಟ್ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ನೀಡಲಾಗಿದ್ದು, ಇದೇ ಕ್ಷೇತ್ರದ ಮತ್ತೊಬ್ಬ ಆಕಾಂಕ್ಷಿ ಆರ್.ಎಂ ಮಂಜುನಾಥಗೌಡ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿಸುವ ಭರವಸೆ ನೀಡಲಾಗಿದೆ.
ಮೊದಲ 124 ಕ್ಷೇತ್ರಗಳ ಪಟ್ಟಿಯಲ್ಲಿ, ಸೊರಬ ಕ್ಷೇತ್ರಕ್ಕೆ ಮಧು ಬಂಗಾರಪ್ಪ, ಸಾಗರ ಕ್ಷೇತ್ರಕ್ಕೆ ಬೇಳೂರು ಗೋಪಾಲಕೃಷ್ಣ ಹಾಗೂ ಭದ್ರಾವತಿ ಕ್ಷೇತ್ರಕ್ಕೆ ಬಿ.ಕೆ ಸಂಗಮೇಶ್ವರಗೆ ಟಿಕೆಟ್ ನೀಡಲಾಗಿತ್ತು.
ಇನ್ನೂ ಜಿಲ್ಲೆಯ ಶಿವಮೊಗ್ಗ ಗ್ರಾಮಾಂತರ, ಶಿವಮೊಗ್ಗ, ಶಿಕಾರಿಪುರ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಬೇಕಿದೆ. ಈ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ದತ್ತಾಗೆ ಕೋಕ್ !
ಇತ್ತೀಚೆಗೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗಿದ್ದ ಕಡೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರಿಗೆ ಟಿಕೆಟ್ ಕೊಡುವಲ್ಲಿ ಕಾಂಗ್ರೆಸ್ ‘ಕೈ’ ಕೊಟ್ಟಿದೆ. ಆದರೆ, ಕಳೆದ ಬಾರಿ ಜೆಡಿಎಸ್‌ನಿಂದ ಸೋತು ಸುಣ್ಣವಾಗಿದ್ದ ದತ್ತಾ ಅವರು, ಕಾಂಗ್ರೆಸ್‌ನಿಂದಾದರೂ ಗೆಲ್ಲೋಣ ಎಂದು ನಿರೀಕ್ಷೆ ಮಾಡಿದ್ದರು. ಆದರೆ, ಅವರ ನಂಬಿಕೆಯನ್ನು ಕಾಂಗ್ರೆಸ್ ಹುಸಿಗೊಳಿಸಿದೆ. ದತ್ತಾ ಅವರ ಬದಲಿಗೆ ಆನಂದ್ ಕೆ.ಎಸ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದು ಅಚ್ಚರಿಗೆ ಕಾರಣವಾಗಿದೆ.