CM Basavaraja Bommai | Araga Jnanendra | ಗೃಹ ಸಚಿವರನ್ನು ಹಾಡಿ ಹೊಗಳಿದ ಸಿಎಂ

ತೀರ್ಥಹಳ್ಳಿ : ಆರಗ ಜ್ಞಾನೇಂದ್ರರಂತಹ ಜನಪರ ನಾಯಕ ದೊರಕುವುದು ಅಪರೂಪ. ಅಡಿಕೆ, ಶರಾವತಿ ಸಂತ್ರಸ್ತರು, ಡೀಮ್ಡ್‌ ಫಾರೆಸ್ಟ್‌, ಪಶ್ಚಿಮಘಟ್ಟ ವಿಚಾರಗಳಿಗೆ ಸಂಬಂಧಿಸಿದಂತೆ ಆರಗ ಜ್ಞಾನೇಂದ್ರ ಅವರು ಪದೇ ಪದೇ ಅತೀವ ಕಾಳಜಿಯಿಂದ ನನ್ನ ಬಳಿ ಬಂದು ಪರಿಹರಿಸಲು ಪೀಡಿಸಿದ್ದಾರೆ. ಅವರ ಇಲಾಖೆಗೆ ಸಂಬಂಧಪಡದ ವಿಚಾರಗಳಾಗಿದ್ದರೂ ಇವುಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ನನಗೆ ಗೃಹಮಂತ್ರಿ ಹುದ್ದೆ ಬೇಡ. ಬದಲಿಗೆ ತೋಟಗಾರಿಕಾ ಮಂತ್ರಿ ಮಾಡಿ ಎಂದಿದ್ದರು. ಗೃಹಮಂತ್ರಿಯಾಗಿ ಅವರಷ್ಟು ಸವಾಲುಗಳನ್ನು ಯಾರು ಎದುರಿಸಲಿಲ್ಲ. ಹಿಜಾಬ್‌, ಹಲಾಲ್‌, ಪಿಎಸ್‌ಐ ಹಗರಣ, ಎಲ್ಲವನ್ನು ಕೂಡ ಅವರು ಬೆನ್ನುಹಾಕಿ ಓಡಿ ಹೋಗದೆ ಸಮರ್ಥವಾಗಿ ಎದುರಿಸಿದ್ದಾರೆ. ಪಿಎಸ್‌ಐ ಹಗರಣದಲ್ಲಂತೂ ಅತ್ಯಂತ ಪಾರದರ್ಶಕ ತನಿಖೆಗೆ ಅದೇಶ ನೀಡಿ ಉನ್ನತ ಅಧಿಕಾರಿಯನ್ನೇ ಜೈಲಿಗೆ ಹಾಕಿದ್ದಾರೆ. ಮಾತ್ರವಲ್ಲದೇ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟ ತನಿಖೆಯನ್ನು ಶೀಘ್ರವಾಗಿ ಮುಗಿಸಿ ತಪಿತಸ್ಥರಿಗೆ ಶಿಕ್ಷೆ ಕೊಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಶ್ಲಾಘಿಸಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ತೂದೂರಿನಲ್ಲಿ ಗುರುವಾರ ಆಯೋಜಿಸಿದ್ದ ಮಂಡಗದ್ದೆ ಶಕ್ತಿ ಕೇಂದ್ರದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವದಿಂದಾಗಿ 2047ರ ಹೊತ್ತಿಗೆ  ಭಾರತ ಪ್ರಪಂಚದಲ್ಲಿಯೇ ಮುಂಚೂಣಿ ಸ್ಥಾನದಲ್ಲಿ ನಿಲ್ಲಲಿದೆ. ಅಂತಹ ದೂರದೃಷ್ಟಿ ಅವರಿಗಿದೆ ಎಂದರು.

ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಅವರ ಸ್ಥಾನಮಾನದ ಯೋಗ್ಯತೆ ತಕ್ಕದಾಗಿ ಮಾತನಾಡಬೇಕು. ಪಿಎಸ್‌ಐ ಹಗರಣದ ಸಾಕ್ಷಿ ಇದೆ ಎಂದು ನನ್ನನ್ನು ತೋಜೋವಧೆ ಮಾಡಲು ಮುಂದಾಗಿದ್ದಾರೆ. ತಾಕತ್ತು ಇದ್ದರೆ ದಾಖಲೆಗಳನ್ನು ಸಿಓಡಿಗೆ ನೀಡಿ ನನ್ನನು ಜೈಲಿಗೆ ಕಳುಹಿಸಲಿ. ಮತದಾರರ ಮುಂದೆ ಸೋಗಲಾಡಿತನ ಪ್ರದರ್ಶಿಸುವುದು ಬೇಡ. ಈ ರೀತಿಯ ಗಿಮಿಕ್‌ ರಾಜಕಾರಣ ಮಾಡಿದ್ದಕ್ಕೆ ಅವರನ್ನು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅರ್ಧದಲ್ಲಿಯೇ ಮಂತ್ರಿ ಸ್ಥಾನದಿಂದ ಕಿತ್ತುಕೊಂಡು ಮನೆಗೆ ಕಳುಹಿಸಿದ್ದರು. ಈ ಬಾರಿ ನಾನು ಹೆಮ್ಮೆಯಿಂದ ಅಭಿವೃದ್ಧಿ ಮುಂದಿಟ್ಟು ಮತಯಾಚಿಸುತ್ತೇನೆ. ಕಾರ್ಯಕರ್ತರ ಸಹಕಾರದಿಂದ ಕ್ಷೇತ್ರದಲ್ಲಿ ನಾನು ಮಾಡಿದ ಅಭಿವೃದ್ಧಿಗೆ ಮತ ನೀಡುವುದಾದರೆ ನನ್ನ ಎದುರಾಳಿಯ ಡಿಪಾಸಿಟ್‌ ಉಳಿಯುವುದಿಲ್ಲ ಎಂದು ಕಿಮ್ಮನೆ ರತ್ನಾಕರ ವಿರುದ್ಧ ಆರಗ ಜ್ಞಾನೇಂದ್ರ ಹರಿಹಾಯ್ದರು.

ಆದರೆ ಅನಿರೀಕ್ಷಿತವಾಗಿ ಸಿಎಂ ಬೊಮ್ಮಾಯಿ ಅವರು ಆಗಮಿಸಿದ್ದಾಗಲೂ ಕಾರ್ಯಕರ್ತರಲ್ಲಿ ಅಂತಹ ಹುಮ್ಮಸ್ಸೇನು ಕಂಡು ಬರಲಿಲ್ಲ. ಅದೇ ಭಾಗದ ಹಿರಿಯ ನಾಯಕ ಅಶೋಕ್‌ ಮೂರ್ತಿ, ಇನ್ನೋರ್ವ ಪ್ರಭಾವಿ ಯುವ ನಾಯಕ ಆರ್.‌ ಮದನ್‌ ಗೈರು ಹಾಜರಿ ಎದ್ದು ಕಂಡಿತಲ್ಲದೇ ಭಿನ್ನಮತದ ಅನುಮಾನವನ್ನು ಮೂಡಿಸಿತ್ತು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ರಾಜ್ಯ ಕಾಂಪೋಸ್ಟ್ ಅಭಿವೃದ್ದಿ ನಿಗಮದ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಬೇಗುವಳ್ಳಿ ಕವಿರಾಜ್, ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ, ತೂದೂರು ಗ್ರಾ.ಪಂ ಅಧ್ಯಕ್ಷ ಮಧುರಾಜ್ ಹೆಗ್ಡೆ ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Articles

error: Content is protected !!