ನರೇಂದ್ರ ಮೋದಿ ದೇಶದ ಜನರ ಬಳಿ ಕ್ಷಮೆ ಕೇಳಬೇಕು ; ಕಿಮ್ಮನೆ ರತ್ನಾಕರ್

0 0

ತೀರ್ಥಹಳ್ಳಿ : ನಾವು ಘೋಷಿಸಿರುವ ಗ್ಯಾರಂಟಿಗಳು ಒಂದೆರಡು ದಿನ ಅಥವಾ 24 ಗಂಟೆಗಳಲ್ಲಿ ಆಗುವಂತಹ ಕೆಲಸ ಅಲ್ಲ. ರಾಜ್ಯದ ಸುಮಾರು 3 ಕೋಟಿಗೂ ಅಧಿಕ ಜನರಿಗೆ ಈ ಯೋಜನೆ ತಲುಪಬೇಕಿದೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದು ಕೇಂದ್ರದ 5 ಕೆಜಿ ಸೇರಿಸಿ ಅದನ್ನು ಬಿಟ್ಟು ನಾವು ಹೇಳಿಲ್ಲ. ನಮ್ಮ ಸರ್ಕಾರ ಇದ್ದಾಗ ಏಳು ಕೆಜಿ ಅಕ್ಕಿ ಕೊಡುತ್ತಿದ್ದೆವು. ಅದರಲ್ಲೂ ಕೂಡ ಕೇಂದ್ರದ 5 ಕೆಜಿ ಅಕ್ಕಿ ಇತ್ತು ಎಂದು ಕಿಮ್ಮನೆ ರತ್ನಾಕರ್ ಹೇಳಿದರು.

ಶುಕ್ರವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದಾಗ ಸರ್ಕಾರಿ ಆಸ್ಪತ್ರೆಗಳಲ್ಲಿ 108 ಆಂಬುಲೆನ್ಸ್ ಇತ್ತು. ಅದರಲ್ಲಿ ಬಿಜೆಪಿಯವರು ಮುಖ್ಯಮಂತ್ರಿ ಹಾಗೂ ಆರೋಗ್ಯ ಮಂತ್ರಿಯವರ ಫೋಟೋ ಹಾಕಿದ್ದರು. ಆದರೆ ಆ ಯೋಜನೆ ತಂದಿದ್ದು ಕೇಂದ್ರ ಸರ್ಕಾರ ಅಂದ್ರೆ ನಮ್ಮ ಯುಪಿಎ ಸರ್ಕಾರವೇ ಹೊರತು ಇಲ್ಲಿನ ಬಿಜೆಪಿ ಸರ್ಕಾರ ಅಲ್ಲ. ಆದರೂ ಬಿಜೆಪಿಯವರು ತಮ್ಮ ಫೋಟೋಗಳನ್ನು ಹಾಕಿಕೊಂಡಿದ್ದರು ಆಗ ನಾವೇನಾದರೂ ಪ್ರತಿಭಟನೆ ಮಾಡಿದ್ದೇವಾ ? ಎಂದು ಪ್ರಶ್ನಿಸಿದರು.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವ ಮುಂಚೆ ಹಲವಾರು ಭರವಸೆಗಳನ್ನು ನೀಡಿತ್ತು. ಅದರಲ್ಲಿ ಬಹು ಮುಖ್ಯವಾಗಿ ಸ್ವಿಸ್ ಬ್ಯಾಂಕ್‌ನಲ್ಲಿ ಇಟ್ಟಿದ್ದ ಕಪ್ಪು ಹಣವನ್ನು 90 ದಿನದ ಒಳಗೆ ತಂದು ಪ್ರತಿ ಭಾರತದ ಪ್ರಜೆಗಳ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಜಮಾ ಮಾಡುವ ಸುಳ್ಳು ಭರವಸೆಯನ್ನ ಕೊಟ್ಟಿದ್ದರು. ಆದರೆ ಅದು ಯಾವುದನ್ನು ಕೂಡ ಈಡೇರಿಸಲಿಲ್ಲ. ಬರೀ 24 ಗಂಟೆಯ ಒಳಗಾಗಿ ಕಾಂಗ್ರೆಸ್ ಸರ್ಕಾರ ಈಡೇರಿಸದಿದ್ದರೆ ಪ್ರತಿಭಟನೆಗೆ ಕೂರುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಬಿಜೆಪಿಯವರು ಕೊಟ್ಟ ಭರವಸೆಯನ್ನು ಈಡೇರಿಸಲಿ ಆಮೇಲೆ ನಮ್ಮ ಬಗ್ಗೆ ಮಾತನಾಡಲಿ ಕೊಟ್ಟ ಭರವಸೆಯನ್ನು ಅನುಷ್ಠಾನ ಮಾಡಲು ಆಗದಿದ್ದರೆ ದೇಶದ ಜನರ ಬಳಿ ಪ್ರಧಾನಿ ಮೋದಿಯವರು ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ರಾಜ್ಯದಲ್ಲೂ ಬಿಜೆಪಿ ಸರ್ಕಾರ ಹಲವಾರು ಆಶ್ವಾಸನೆಗಳನ್ನು ನೀಡಿತ್ತು. ಮಹಿಳೆಯರಿಗೆ 3 ಗ್ರಾಂ ಚಿನ್ನ ಕೊಡುತ್ತೇವೆ ಎಂದಿದ್ದರು. ಆದರೆ ಇವರು ಮಾಡಿದ್ದು ಬಗರ್ ಹುಕ್ಕುಂ ಸರ್ಕಾರ, ಆಶ್ವಾಸನೆ ಮಾಡಿದವರೇ ಬೇರೆ ಭಾಷಣ ಬಿಗಿದವರೇ ಬೇರೆ. ಅನುಷ್ಠಾನ ಮಾಡಿದವರಿಗೆ ಬ್ರೈನ್ ಟ್ಯೂಮರ್ ಬಂದು ಮರೆತು ಹೋಯ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು

ಬಡವರಿಗೆ ಅಕ್ಕಿಯನ್ನು ಕೊಡಬೇಕಾಗಿದ್ದು ಕೇಂದ್ರ ಸರ್ಕಾರವೇ. ಇಲ್ಲಿಯವರೆಗೂ ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿದೆ . ಯುಪಿಎ ಸರ್ಕಾರ ಆಗಿರಬಹುದು ಅಥವಾ ಈಗಿನ ಬಿಜೆಪಿ ಸರ್ಕಾರವೇ ಆಗಿರಬಹುದು. ಆದರೆ ಅಕ್ಕಿಯನ್ನು ಕೊಟ್ಟಿದ್ದು ನಾವೇ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿಯವರು ಏನು ಮನೆಯಿಂದ ತಂದು ಕೊಟ್ಟಿದ್ದ? ಬಿಜೆಪಿಯವರದೇ ಅಕ್ಕಿ ಆಗಿದ್ದೆ ಆದರೆ ನಮಗೆ ಅದರ ಅಗತ್ಯ ಬೇಡ ಎಂದರು.

ಬಿ.ಎಸ್ ಯಡಿಯೂರಪ್ಪನವರು ಅಥವಾ ಬಿ.ವೈ ರಾಘವೇಂದ್ರ ಅವರೇ ಆಗಲಿ ನಾನಿದ್ದಂತಹ 10 ವರ್ಷಗಳ ಕಾಲ ತೀರ್ಥಹಳ್ಳಿ ಕ್ಷೇತ್ರಕ್ಕೆ ಪೂರ್ಣ ಸಹಕಾರವನ್ನು ಕೊಟ್ಟಿದ್ದಾರೆ. ಅದರ ಬಗ್ಗೆ ನನಗೆ ಗೌರವವಿದೆ. ಆದರೆ ಯಡಿಯೂರಪ್ಪನವರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಅವರು ಕೊಟ್ಟಂತಹ ಆಶ್ವಾಸನೆಗಳನ್ನ ಈಡೇರಿಸಲಿ ಮಹಿಳೆಯರಿಗೆ ಬಂಗಾರ ಕೊಡುತ್ತೇನೆ, ಮದುವೆಗೆ 25.000 ಕೊಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರಲ್ಲ ಅದಕ್ಕೆ ಕ್ಷಮೆ ಕೇಳಬೇಕು ಕಾಂಗ್ರೆಸ್ ಅನುಷ್ಠಾನ ಮಾಡಿದ್ದಕ್ಕೆ ಪ್ರಶ್ನೆ ಮಾಡುವುದಾದರೆ ಇವರ ವಿರುದ್ಧ ನಾನು ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದರು.

ಜುಲೈ 3 ರಂದು ಬೆಳಗ್ಗೆ 9:30 ರಿಂದ ಸಂಜೆ 5:30ರ ವರೆಗೆ ಶಿವಮೊಗ್ಗದ ಗಾಂಧಿ ಪ್ರತಿಮೆ ಎದುರು ನಾನು ಉಪವಾಸ ಸತ್ಯಾಗ್ರಹ ಮಾಡಲಿದ್ದೇನೆ. ಇದರಲ್ಲಿ ತಾಲೂಕು ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾ ಎಲ್ಲರೂ ಕೂಡ ಭಾಗಿಯಾಗಲಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಕೊಟ್ಟ ಆಶ್ವಾಸನೆಗಳಲ್ಲಿ ವಿಫಲವಾಗಿದ್ದಕ್ಕೆ ಹಾಗೂ ಕೇಂದ್ರ ಸರ್ಕಾರ ಕೊಟ್ಟ ಆಶ್ವಾಸನೆಗಳಲ್ಲಿ ವಿಫಲವಾಗಿದ್ದಕ್ಕೆ ಈ ಉಪವಾಸ ಸತ್ಯಾಗ್ರಹ ಮಾಡಲಿದ್ದೇನೆ. ಬಿಜೆಪಿಯವರು ಕೊಟ್ಟಂತಹ ಆಶ್ವಾಸನೆಗಳನ್ನು ಈಡೇರಿಸಿ ನಮ್ಮ ಸರ್ಕಾರದ ಆಶ್ವಾಸನೆಗಳಿಗೆ ತಕರಾರು ಮಾಡಲಿ ಎಂದರು.

ತ್ರಿವಳಿ ತಲಾಕ್ ರದ್ದತಿ ವಿಚಾರವಾಗಿ ಮಾತನಾಡಿ, ಮೋದಿಯವರು ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಆ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿದೆ. ಅದು ಮುಸ್ಲಿಂ ವಿಷಯಕ್ಕೆ ಸಂಬಂಧಪಟ್ಟ ವಿಚಾರ ಅದರ ನಾನು ಓದಿಕೊಂಡಿಲ್ಲ. ಆ ವಿಷಯ ನನಗೆ ಗೊತ್ತಿಲ್ಲ ಆದರೆ ಹಿಂದೂ ಧರ್ಮದ ಬಗ್ಗೆ ನಾನು ಓದಿಕೊಂಡಿದ್ದೇನೆ. ಹಿಂದೂ ಧರ್ಮದ ಅಸಮಾನತೆ ಮತ್ತು ಅಸ್ಪರ್ಶತೆ ಹೋಗಲಾಡಿಸಲು ಮೋದಿ ಕಾರ್ಯಕ್ರಮ ಏನಿತ್ತು ? ಎಂದು ಪ್ರಶ್ನಿಸಿದರು.

ಇನ್ನು ಗ್ಯಾರಂಟಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕೆಂದು ಈ ರೀತಿ ಮಾಡುತ್ತಿದ್ದಾರೆ. ಕುಂಕುಮ ಅಥವಾ ಮೈಸೂರ್ ಪಾಕ್ ತಂದಷ್ಟು ಸುಲಭವಲ್ಲ. ಮಹಿಳೆಯರ ಅಕೌಂಟಿಗೆ ಹಣ ಹಾಕಲು ಅಥವಾ ಇತರ ಗ್ಯಾರಂಟಿ ಯೋಜನೆ ಅನುಷ್ಠಾನ ತರಲು ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಇವೆಲ್ಲವನ್ನು ತಕ್ಷಣಕ್ಕೆ ಜಾರಿ ಮಾಡಲು ಆಗುವುದಿಲ್ಲ. 9 ವರ್ಷದಿಂದ ಏನು ಮಾಡಲು ಆಗದಿದ್ದವರು ನಮ್ಮನ್ನು ಕೇಳುವಂತದ್ದು ಏನಿದೆ ? ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್‌ನವರು ಇಡೀ ದೇಶದಲ್ಲೇ ಬಡವರ ಪರವಾದ ಎಲ್ಲಾ ಕಾರ್ಯಕ್ರಮಗಳನ್ನು ಮಾಡಿ ಯಶಸ್ವಿಯಾದಂತವರು. ಇಂದಿರಾ ಗಾಂಧಿ ಸರ್ಕಾರ ಬಂದಿದ್ದು ಬಡವರ ಪರವಾದ ಕಾರ್ಯಕ್ರಮದ ಮೂಲಕವೇ ಹೊರತು ಜಾತಿ ಧರ್ಮಗಳಿಂದ ಅಲ್ಲ. ಇವರು ಮಾಡುತ್ತಿರುವುದು ಜಾತಿ ಧರ್ಮದ ಸಂಘರ್ಷ. ರಾಮ ಮಂದಿರ, ಏಕರೂಪ ಕಾಯ್ದೆ, ಆರ್ಟಿಕಲ್ 370 ರದ್ದು ಇವೆಲ್ಲವೂ ಕೂಡ ಜಾತಿ ಧರ್ಮಕ್ಕೆ ಸಂಬಂಧಪಟ್ಟಿದ್ದು ಅದನ್ನು ಬಿಟ್ಟು ನೋಡಿದರೆ ಇವರು ದೇಶಕ್ಕೆ ಏನು ಮಾಡಿಲ್ಲ ಎಂದರು.

ಈ ಸಂದರ್ಭದಲ್ಲಿ ನಾರಾಯಣ ರಾವ್, ಕೆಸ್ತೂರು ಮಂಜುನಾಥ್, ವಿಶ್ವನಾಥ್ ಶೆಟ್ಟಿ, ಸುಶೀಲ ಶೆಟ್ಟಿ, ಕಡ್ತೂರು ದಿನೇಶ್, ರೆಹಮಾತುಲ್ಲ ಅಸಾದಿ ಸೇರಿ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!