ಬಿಜೆಪಿಯವರಿಗೆ 40 ಎಂದರೆ ಬಹಳ ಪ್ರೀತಿ ಹಾಗಾಗಿ ಅವರಿಗೆ 40 ಸೀಟು ಮಾತ್ರ ನೀಡಿ ; ರಾಹುಲ್ ಗಾಂಧಿ

0 0

ತೀರ್ಥಹಳ್ಳಿ : ಕಾಂಗ್ರೆಸ್‌ ಕಾರ್ಯಕರ್ತರು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದಾರೆ.
ಎಲ್ಲೇ ಹೋದರೂ ಪ್ರೀತಿಯನ್ನು ಹಂಚುತ್ತಾರೆ.
ಯಾವುದೇ ಜಾತಿ, ಧರ್ಮ ನೋಡದೆ ಎಲ್ಲರೊಂದಿಗೆ ಬೆರೆಯುತ್ತಾರೆ. ನಾನು ಎಲ್ಲೇ ಹೋದರು ನಮ್ಮ ನಾಯಕರ ಹೆಸರನ್ನು ಹೇಳುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದರು.

ಮಂಗಳವಾರ ಪಟ್ಟಣದ ಬಾಳೇಬೈಲಿನಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯನ್ನು ನೋಡಿ ಅವರು ಯಾರ ಹೆಸರನ್ನೂ ಹೇಳುವುದಿಲ್ಲ. ಹಾಗಾಗಿ ಜನರು ಯಡಿಯೂರಪ್ಪ ಅವರ ಹೆಸರನ್ನು ಏಕೆ ಹೇಳುವುದಿಲ್ಲ ಎಂದು ಕೇಳುತ್ತಿದ್ದಾರೆ. ಗೃಹ ಸಚಿವರು ಪೊಲೀಸ್ ನೇಮಕಾತಿಯ ಹಗರಣದಲ್ಲಿದ್ದಾರೆ. ಪ್ರಧಾನಿ ಮೋದಿ ಕೇವಲ ಮೋದಿ ಬಗ್ಗೆ ಮಾತ್ರ ಮಾತನಾಡುತ್ತಾರೆ. ಗೃಹ ಸಚಿವರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ಇಲ್ಲ. ರಾಜ್ಯ ಸರ್ಕಾರ ಕಳ್ಳ ಸರ್ಕಾರವಾಗಿದೆ.
ಏಕೆಂದರೆ ಕಳೆದ 2 ವರ್ಷದ ಹಿಂದೆ ಬಂದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಹಾಗಾಗಿ ಮೋದಿಯವರು ಯಡಿಯೂರಪ್ಪ, ಬೊಮ್ಮಾಯಿ ಹಾಗೂ ಗೃಹ ಸಚಿವರ ಹೆಸರನ್ನೇ ಹೇಳುವುದಿಲ್ಲ ಎಂದರು.

ಮಹಾದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಬಿಜೆಪಿ ಸರ್ಕಾರ ಏನು ಮಾಡಿತು. ಇಲ್ಲಿಂದ ತೆರಿಗೆ ರೂಪದಲ್ಲಿ ಪಡೆದ ಹಣ ಎಲ್ಲಿ ಹೋಯಿತು. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದರೂ ಏಕೆ ಉತ್ತರವಿಲ್ಲ. ವಿಐಎಸ್ ಎಲ್ ಕಾರ್ಖಾನೆ ಉಳಿಸಲು ಏನು ಮಾಡಿದ್ದೀರಾ ? ಇದೇ ಮೊದಲ ಬಾರಿಗೆ ರೈತರು ತೆರಿಗೆ ನೀಡುವ ಪರಿಸ್ಥಿತಿ ಬಂದಿದೆ. ಸಿಲಿಂಡರ್, ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ದೇಶದ ಸಂಪತ್ತು ಕೇವಲ ಶೇ.1ರಷ್ಟು ಜನರ ಕೈಯಲ್ಲಿದೆ. ನಿರುದ್ಯೋಗ ಮತ್ತು ಬಡತನದ ಪ್ರಮಾಣ ಹೆಚ್ಚಾಗಿದೆ. ಇದಕ್ಕಾಗಿ ನಾವು 5 ಯೋಜನೆಯನ್ನು ಜಾರಿಗೆ ತರುವ ಭರವಸೆ ನೀಡಿದ್ದೇವೆ ಎಂದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ಮಹಿಳೆಯರಿಗೆ ಕಷ್ಟವಾಗುತ್ತಿದೆ. ಅದಕ್ಕಾಗಿ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನ ಭಾಗ್ಯ, ಮಹಿಳೆಯರಿಗೆ ಉಚಿತ ಪ್ರಯಾಣ, ಯುವ ನಿಧಿ ಗ್ಯಾರಂಟಿ ನೀಡಲಿದ್ದೇವೆ. ಇದನ್ನು ಮೊದಲ ದಿನವೇ ಜಾರಿಗೆ ತರಲಿದ್ದೇವೆ. ರೈತರಿಗೆ ಪ್ರತಿ ವರ್ಷಕ್ಕೆ 30 ಸಾವಿರ ಕೋಟಿ ನೆರವು ನೀಡಲಿದ್ದೇವೆ. ಅಡಿಕೆ, ತೆಂಗು ಬೆಳೆಗಾರರಿಗೆ ನೆರವು, ಹಾಲಿಗೆ ಸಬ್ಸಿಡಿ ನೀಡಲಿದ್ದೇವೆ. ನಾವು 91 ಸಲ ದೋಷಿಸಿದ್ದೇವೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಇಲ್ಲಿನ ಲಂಚ, ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ನೀವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೀರಾ ಎಂದು ಹೇಳಿ. 40 ಪರ್ಸೆಂಟ್ ನ್ನು 50 ಪರ್ಸೆಂಟ್ ಗೆ ಹೆಚ್ಚುತ್ತಿಸಿರಾ. ಈ ಭೂಮಿಯಲ್ಲಿ ಕೇವಲ ಮೋದಿ ಮಾತ್ರ ಇಲ್ಲ. ಸಾಮಾನ್ಯ ಜನರೂ ಇದ್ದಾರೆ. ಹಾಗಾಗಿ ಅವರ ಬಗ್ಗೆ ಮಾತನಾಡಿ ಎಂದರು.

ಇಲ್ಲಿನ ಯುವಕರು, ಮಹಿಳೆಯರು, ರೈತರು ಮೊದಲಾದವರ ಬಗ್ಗೆ ಮ‍ಾತನಾಡಿ ಇನ್ನು ಮುಂದಾದರೂ ನಿಮ್ಮ ಭಾಷಣದಲ್ಲಿ ಶೇ. 70 ನಿಮ್ಮ ಬಗ್ಗೆ ಶೇ 30 ರಷ್ಟು ಜನರ ಬಗ್ಗೆ ಮಾತನಾಡಿ
ಬಿಜೆಪಿ ಕಳ್ಳತನದ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಮುಂದೆಯೂ ಹೀಗೆ ಮಾಡಲಿದೆ. ಹಾಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ನೀಡಿ. ಬಿಜೆಪಿಯವರಿಗೆ 40 ನಂಬರ್ ಮೇಲೆ ಬಹಳ ಪ್ರೀತಿ ಇದೆ. ಹಾಗಾಗಿ ಅವರಿಗೆ 40 ಸೀಟು ಮಾತ್ರ ನೀಡಿ ಎಂದು ಸಭೆಯಲ್ಲಿ ಹೇಳಿದರು.

ಇನ್ನು ಕರುನಾಡ ಚಕ್ರವರ್ತಿ ಡಾ. ಶಿವರಾಜ್‍ಕುಮಾರ್ ಮಾತನಾಡಿ, ನಾನು ರಾಹುಲ್ ಗಾಂಧಿ ನೋಡಲೆಂದು ಬಂದಿದ್ದೇನೆ. ಅವರ ಫಿಟ್ನೆಸ್ ಕಂಡರೆ ಇಷ್ಟ. ನನ್ನ ಮಾವ ಬಂಗಾರಪ್ಪ ಕೂಡ ರಾಜಕಾರಣದಲ್ಲಿದ್ದರು. ಯಾರನ್ನ ಆಯ್ಕೆ ಮಾಡಬೇಕು ಎಂದು ಜನರಿಗೆ ಗೊತ್ತು. ಒಳ್ಳೇವರಿಗೆ ಆಶೀರ್ವಾದ ಮಾಡಿ ಎಂದರು.

ರಾಹುಲ್ ಜೊತೆ ವೇದಿಕೆ ಹಂಚಿಕೊಳ್ಳದ ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಿಮ್ಮನೆ ರತ್ನಾಕರ್ ರಾಹುಲ್ ಗಾಂಧಿಯವರ ಜೊತೆ ವೇದಿಕೆ ಹಂಚಿಕೊಳ್ಳಲಿಲ್ಲ.
ವೇದಿಕೆ ಮುಂಭಾಗದಲ್ಲಿ ಇದ್ದ ಮೀಡಿಯಾ ಗ್ಯಾಲರಿಯಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಿದರು. ಚುನಾವಣಾ ನೀತಿ ಸಂಹಿತೆ ಕಾರಣ ಕಿಮ್ಮನೆ ವೇದಿಕೆ ಮೇಲೆ ಏರಲಿಲ್ಲ ಎಂದು ಹೇಳಲಾಗುತ್ತಿದೆ.

ಸಭೆಯಲ್ಲಿ ಆರ್ ಎಂ ಮಂಜುನಾಥ್ ಗೌಡ, ಡಾ. ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಮಧು ಬಂಗಾರಪ್ಪ, ಸೇರಿ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!