ಸಕಲ ಸರ್ಕಾರಿ ಗೌರವಗಳೊಂದಿಗೆ ಸುಂದರೇಶ್ ಅಂತ್ಯಕ್ರಿಯೆ ; ಇವರ ಬಾಲ್ಯ ಹೇಗಿತ್ತು ? ಸ್ನೇಹಿತರು ಏನೆನ್ನುತ್ತಾರೆ ? ಇಲ್ಲಿದೆ ನೋಡಿ

0 80

ತೀರ್ಥಹಳ್ಳಿ: ಸಕಲೇಶಪುರ ಕಾಡುಮನೆ ಬಳಿ ಗುರುವಾರ ರಕ್ಷಿತಾರಣ್ಯದಲ್ಲಿ ಬೆಂಕಿ ನಂದಿಸಲು ಹೋಗಿ ಗಾಯಗೊಂಡು, ಶನಿವಾರ ಮೃತಪಟ್ಟ ತಾಲ್ಲೂಕಿನ ತೆಂಗಿನಕೊಪ್ಪದ ಸಂಪಿಗೇಸರ ಮೂಲದ ಅರಣ್ಯರಕ್ಷಕ ಸುಂದರೇಶ್ ಎಸ್.ಜೆ. ಅವರಿಗೆ ಬಾಲ್ಯದಿಂದಲೂ ಕಾಡು ಎಂದರೆ ಪ್ರೀತಿ.

‘ಸುತ್ತಲು ನೋಡಿಕೊಂಡು ಬೆಳೆದ ಪರಿಸರದ ಬಗ್ಗೆ ಸೂಕ್ಷ್ಮ ಗ್ರಹಿಕೆ ಹೊಂದಿದ್ದರು. ಕಾಡಿನ ಬಗೆಗಿನ ವಾತ್ಸಲ್ಯದಿಂದ ಅರಣ್ಯ ರಕ್ಷಕನಾಗಿ ಸೇವೆಗೆ ಸೇರಿಕೊಂಡಿದ್ದ. ತಮಾಷೆಯ ಮುನುಷ್ಯನಾಗಿದ್ದ ಸುಂದರೇಶ್‌ ಸುತ್ತಮುತ್ತಲ ಗೆಳೆಯರಿಗೆ ಸದಾಕಾಲ ಸಂತೋಷ ನೀಡುತ್ತಿದ್ದರು. ಮಾತಿಗೆ ಇಳಿದರೆಂದರೆ ನಗುವಿನ ಹೊನಲಿನಲ್ಲಿ ತೇಲಿ ಬಿಡುತ್ತಿದ್ದರು. ಆತನ ಅಗಲಿಕೆಯಿಂದ ಅತೀವ ಬೇಸರ ತರಿಸಿದೆ’ ಎನ್ನುತ್ತಾರೆ ಸುಂದೇಶ್‌ ಅವರ ಗೆಳೆಯರಾದ ಸವಿತಾ, ವಿಕ್ಕಿ, ಪ್ರೇಮ್‌.

‘ಮುನ್ನುಗ್ಗುವ ಸ್ವಭಾವದಿಂದ ಸ್ನೇಹಿತರಿಗೆ ಧೈರ್ಯ ತುಂಬುತ್ತಿದ್ದ. ಆನೆ, ಹಾವು, ಕಾಡು ಪ್ರಾಣಿಗಳ ಕಿಂಚಿತ್ತೂ ಹೆದರಿಕೆ ಇಲ್ಲದೆ ಕೆಲಸ ಮಾಡುತ್ತಿದ್ದ. 4 ವರ್ಷಗಳ ಹಿಂದೆ ಆನೆ ಓಡಿಸಲು ಪಟಾಕಿಗಳನ್ನು ಸಿಡಿಸುವ ಸಂದರ್ಭ ತನ್ನ ಒಂದು ಬೆರಳನ್ನು ಕಳೆದುಕೊಂಡಿದ್ದ. ವಿಷಭರಿತ ಹಾವುಗಳನ್ನು ಸುರಕ್ಷತೆಯಿಂದ ಕಾಡಿಗೆ ತಲುಪಿಸುವ ಸಾಹಸಿಗ’ ಎಂದು ಅವರು ಸ್ಮರಿಸುತ್ತಾರೆ.

ಕೊಂಡ್ಲೂರಿನಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿದ ನಂತರ ಪಟ್ಟಣದ ತುಂಗಾ ಮಹಾವಿದ್ಯಾಲಯದಲ್ಲಿ ಸುಂದರೇಶ್‌ ಬಿಎ ಪದವಿ ಪಡೆದಿದ್ದರು. ರಕ್ಷಿತಾ ಬಿ.ಜೆ. ಅವರನ್ನು 7 ವರ್ಷಗಳ ಹಿಂದೆ ವರಿಸಿದ್ದರು. 4 ವರ್ಷದ ಪುತ್ರಿ ಶಾರ್ವರಿ ಎಸ್.ಎಸ್.‌ ಹಾಗೂ ತಂದೆ ಜಯಚಂದ್ರಗೌಡ ಇದ್ದಾರೆ. ತಾಯಿ ಶಾರದಾ ಎರಡು ವರ್ಷಗಳ ಹಿಂದೆ ಮಂಗನಕಾಯಿಲೆಯಿಂದ ಮೃತಪಟ್ಟಿದ್ದರು.

ಗಾರ್ಡ್ ಸುಂದರೇಶ್ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಯಿತು. ಸುಂದರೇಶ್ ಮೂರು ಸುತ್ತು ಕುಶಾಲು ತೋಪು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು.

Leave A Reply

Your email address will not be published.

error: Content is protected !!