ಸಾಗರ

ದಸರಾ ರಜೆ ಮಜಾ ಸವಿಯಲು ತಾತನ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರುಪಾಲು

ಈಜಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿರುವ ಅತ್ಯಂತ ದಾರುಣ ಘಟನೆ ವರದಿಯಾಗಿದೆ.

ದಸರಾ ರಜೆ ಮಜಾ ಸವಿಯಲು ತಾತನ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರುಪಾಲು Boys

ಸಾಗರ : ತಾಲೂಕಿನ ಆಲಳ್ಳಿ ಗ್ರಾಮದ ಹೊಸಕೆರೆಯಲ್ಲಿ ಭಾನುವಾರ ಈಜಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿರುವ ಅತ್ಯಂತ ದಾರುಣ ಘಟನೆ ವರದಿಯಾಗಿದೆ. ಈ ಘಟನೆಯಿಂದ ಇಡೀ ಗ್ರಾಮದಲ್ಲಿ ನೀರವ ಮೌನ ಮತ್ತು ಶೋಕದ ವಾತಾವರಣ ಆವರಿಸಿದೆ.

WhatsApp Group Join Now
Telegram Group Join Now
Instagram Group Join Now

ನೀರುಪಾಲಾದ ಮಕ್ಕಳನ್ನು ಮುಳುಕೇರಿ ಗ್ರಾಮದ ಷಣ್ಮುಖ ಎಂಬುವವರ ಮಗ ಲೇಖನ್ (13) ಹಾಗೂ ಆಲಳ್ಳಿಯ ಗಣೇಶ್ ಅವರ ಮಗ ಪುನೀತ್ (11) ಎಂದು ಗುರುತಿಸಲಾಗಿದೆ. ದಸರಾ ರಜೆ ಕಳೆಯಲೆಂದು ಈ ಇಬ್ಬರೂ ಮಕ್ಕಳು ತಮ್ಮ ತಾತನ ಮನೆಗೆ ಬಂದಿದ್ದರು. ಭಾನುವಾರ ಮಧ್ಯಾಹ್ನದ ವೇಳೆಗೆ ಇಬ್ಬರೂ ಸೇರಿ ಹೊಸಕೆರೆಗೆ ಈಜಲು ಹೋಗಿದ್ದಾರೆ. ಆದರೆ, ಕೆರೆಯ ನೀರಿನ ಆಳದ ಅರಿವಿಲ್ಲದೆ ಇಬ್ಬರೂ ಮುಳುಗಿ ಜಲಸಮಾಧಿಯಾಗಿದ್ದಾರೆ.

ಶಿಕ್ಷಕಿಯ ಕಂಬನಿ ಮತ್ತು ಪೋಷಕರಿಗೆ ಎಚ್ಚರಿಕೆ:

ದಸರಾ ರಜೆ ಆರಂಭವಾಗುವ ಮುನ್ನವೇ ಶಾಲೆಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಕೆರೆ ಅಥವಾ ನದಿಗಳ ಬಳಿ ತೆರಳದಂತೆ ಕಿವಿಮಾತು ಹೇಳಿದ್ದರು. ಇಷ್ಟಾದರೂ ಈ ದುರ್ಘಟನೆ ನಡೆದುಹೋಗಿದೆ. ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಶಿಕ್ಷಕಿ, ವಿದ್ಯಾರ್ಥಿಗಳ ಮೃತದೇಹ ಕಂಡು ಕಣ್ಣೀರಿಟ್ಟರು. ಇದೇ ವೇಳೆ, ರಜೆಯ ಸಮಯದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಕೆರೆ, ನದಿಗಳ ಬಳಿ ಒಬ್ಬಂಟಿಯಾಗಿ ಬಿಡಬಾರದು ಎಂದು ಅವರು ಕಳಕಳಿಯಿಂದ ಮನವಿ ಮಾಡಿದರು.

ಆಸ್ಪತ್ರೆ ಆವರಣದಲ್ಲಿ ಹೆತ್ತವರ ಆಕ್ರಂದನ:

ಬಾಲಕರ ಮೃತದೇಹಗಳನ್ನು ಸುಳಿಯಿಂದ ಹೊರತೆಗೆದು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಲಾಯಿತು. ಸುದ್ದಿ ತಿಳಿದು ಆಸ್ಪತ್ರೆಯತ್ತ ದೌಡಾಯಿಸಿದ ಪೋಷಕರು ಹಾಗೂ ಸಂಬಂಧಿಕರ ರೋಧನ ಮುಗಿಲುಮುಟ್ಟಿತ್ತು. ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಕಳೆದುಕೊಂಡ ತಾಯಂದಿರ ಕಣ್ಣೀರು ನೆರೆದವರ ಹೃದಯ ಹಿಂಡುವಂತಿತ್ತು.

ಶಾಸಕರ ಸಂತಾಪ ಹಾಗೂ ಪ್ರಕರಣ ದಾಖಲು:

ಈ ಹೃದಯವಿದ್ರಾವಕ ಘಟನೆಗೆ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತೀವ್ರ ದಿಗ್ಭ್ರಮೆ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ. “ಈ ಎಳೆಯ ಜೀವಗಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಆ ಕುಟುಂಬಕ್ಕೆ ಕರುಣಿಸಲಿ” ಎಂದು ಅವರು ಪ್ರಾರ್ಥಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!