ಇಂದು ವಿಶ್ವ ಕರಡಿ ದಿನ ; ಕರಡಿಗಳ ಬಗ್ಗೆ ನಿಮಗೆಷ್ಟು ಗೊತ್ತು ?

0
230

ಕರಡಿಗಳು ನಾಯಿ ಕುಟುಂಬದ ದೂರದ ಸಂಬಂಧಿಗಳು, ಇವುಗಳನ್ನು Ursidae ಕುಟುಂಬಕ್ಕೆ ಸೇರಿಸಲಾಗಿದೆ. ಇವು ಅನೇಕ ಪರಿಸರಕ್ಕೆ ಹೊಂದಿಕೊಂಡು ಪ್ರಪಂಚದಾದ್ಯಂತ ನೆಲೆಸಿವೆ, ಅಲಾಸ್ಕದಲ್ಲಿ ವಿಶ್ವದ ಅತಿ ದೊಡ್ಡ ಕೋಡಿಯಾಕ್ ಕರಡಿ (Kodiak Brown bear) ಕಂಡುಬಂದರೆ, ಅತೀ ಶೀತ ಆರ್ಕಟಿಕ್ ವಲಯದಲ್ಲಿ ಭೂಮಿ (ನೆಲ) ಮೇಲಿನ ಅತೀ ದೊಡ್ಡ ಮಾಂಸಹಾರಿ ಪ್ರಾಣಿಯಾದ, ದೃವ ಕರಡಿ ವಾಸಿಸುತ್ತದೆ, ಉಷ್ಣವಲಯದಲ್ಲಿ ವಿವಿಧ ಜಾತಿ ಕರಡಿಗಳು ವಾಸಿಸುತ್ತಿವೆ.ಆದರೆ ಅಚ್ಚರಿ ಎನ್ನುವಂತೆ ಆಫ್ರಿಕಾ ಹಾಗು ಆಸ್ಟ್ರೇಲಿಯಾದಲ್ಲಿ ಕರಡಿಗಳು ಇಲ್ಲ. ಕರಡಿಗಳಂತೆ ಪಾಂಡಾಗಳು ಕಂಡು ಬಂದರೂ ಇವುಗಳನ್ನು ಬೇರೆ ಕುಟುಂಬಕ್ಕೆ ಸೇರಿಸಲಾಗಿದೆ.

ಸಾಮಾನ್ಯ ಲಕ್ಷಣಗಳು:

ಹಿಮ ಕರಡಿ ಹೊರತುಪಡಿಸಿದರೆ ಉಳಿದವು ಮಿಶ್ರಹಾರಿಗಳು, ಇವುಗಳಿಗೆ ಮಾಂಸವನ್ನು ಹರಿಯುವ ಕಾರ್ನೇಸಿಯಲ್ ಹಲ್ಲುಗಳಿಲ್ಲ,ಬಾಲವಿಲ್ಲ, ಇದ್ದರೂ ಅತೀ ಚಿಕ್ಕದು, ನೆಲಕ್ಕೆ ಮನುಷ್ಯರಂತೆ ಪೂರ್ಣ ಊರುವ ಪಾದಗಳಿವೆ, ಹೆಜ್ಜೆಗಳು ಮನುಷ್ಯರಂತೆ ಕಂಡರೂ ಮುಂದಿರುವ ಉಗುರಿನ ಗುರುತು ಬೀಳುವುದರಿಂದ ವ್ಯತ್ಯಾಸ ತಿಳಿಯಬಹುದು, ಪ್ರತಿ ಪಾದದ ಬೆರಳುಗಳಿಗೆ ಉದ್ದವಾದ ಬಾಗಿದ ಮೊನಚಾದ ನಖಗಳಿವೆ.ಮೂಗು ಮತ್ತು ಕಿವಿ ತುಂಬಾ ಚುರುಕು ಕಣ್ಣು ಮಂದ, ಕೆಲ ಜಾತಿಯ, ಕರಡಿಗಳು ಮರ ಏರುತ್ತವೆ, ಹಿಂಗಾಲುಗಳ ಮೇಲೆ ನಿಂತು ಕೆಲ ಹೆಜ್ಜೆ ನಡೆಯಬಲ್ಲವು. ಜೇನು, ಗೆದ್ದಲು, ಹಣ್ಣು, ಮೀನು, ಇರುವೆಗಳನ್ನು ತಿನ್ನುತ್ತವೆ. ಶೀತ ವಲಯದ ಕರಡಿಗಳು ಚಳಿಗಾಲದಲ್ಲಿ ಶಿಶಿರ ನಿದ್ರೆ ಮಾಡುತ್ತವೆ, ಉಷ್ಣವಲಯದ ಕರಡಿಗಳು ಶಿಶಿರನಿದ್ರೆ ಮಾಡುವುದಿಲ್ಲ, ಹುಟ್ಟುವ ಮರಿಗಳು ಕೂದಲ್ಲಿಲ್ಲದೆ, ಕುರುಡಾಗಿ ಹುಟ್ಟುತ್ತವೆ.

ನಮ್ಮ ದೇಶದಲ್ಲಿ 4 ಬಗೆಯ ಕರಡಿಗಳನ್ನು ಗುರುತಿಸಲಾಗಿದ್ದು ನಮ್ಮ ರಾಜ್ಯದಲ್ಲಿ ಸ್ಲಾಥ್ ಕರಡಿ ಮಾತ್ರ ಕಂಡು ಬರುತ್ತದೆ.

1) SLOTH BEAR:

ನಮ್ಮಲ್ಲಿರುವ ಕರಡಿಗೆ Sloth bear ಎಂದು ಹೆಸರು, ಈ Sloth bear ಅರ್ಥ ಹುಡುಕಿದರೆ ಎಲ್ಲಾ ಕಡೆ ಇದು ಸೋಮಾರಿ ಕರಡಿ ಎಂಬ ಮಾಹಿತಿ ಸಿಗುತ್ತದೆ, ಸ್ವಲ್ಪ ದೀರ್ಘ ನಿದ್ರೆ ಮಾಡುತ್ತವೆ, ಅದನ್ನು ಬಿಟ್ಟರೆ ಸೋಮಾರಿಯ ಯಾವ ಲಕ್ಷಣಗಳು ಈ ಕರಡಿಯಲ್ಲಿಲ್ಲ. ಆದರೂ ಈ ಕರಡಿಗೆ Sloth bear ಹೆಸರು ಬರಲು ಬೇರೆ ಕಾರಣವೇ ಇರಬೇಕು, 18 ನೇ ಶತಮಾನದ ಅಂತ್ಯದಲ್ಲಿ ವೈಜ್ಞಾನಿಕ ಪರಿಶೀಲನೆಗಾಗಿ ಕಳುಹಿಸಿದ ಈ ಕರಡಿಯ ಚರ್ಮವು ದಕ್ಷಿಣ ಅಮೆರಿಕಾದ ಸ್ಲಾಥ್ ಪ್ರಾಣಿಯಂತೆ ಕಂಡಿದ್ದರಿಂದ Sloth bear ಎಂಬ ಹೆಸರು ಬಂತು, ಮುಂದೆ 1810 ರಲ್ಲಿ ಜೀವಂತ ಕರಡಿಯನ್ನು ಪ್ಯಾರಿಸ್ ಗೆ ಒಯ್ದ ನಂತರ ಇದು ಕರಡಿ ಎಂದು ತೀರ್ಮಾನಿಸಲಾಯಿತು, ಆದರೆ ಮೊದಲಿನ ಸ್ಲಾಥ್ ಹಾಗೆ ಉಳಿದುಕೊಂಡಿದೆ.

ಎತ್ತರ 65-85 CM, ಎರಡು ಕಾಲಲ್ಲಿ ಎದ್ದು ನಿಂತರೆ ಆರಡಿ ಮನುಷ್ಯನಷ್ಟು ಎತ್ತರ, ಗಂಡು 130 -145 ಕಿಲೋ ಹೆಣ್ಣು 70-80 ಕಿಲೋ ತೂಗುತ್ತವೆ. ಕಪ್ಪು ಬಣ್ಣದ ಒರಟು ಕೂದಲು, ದಪ್ಪವಾದ ಚಲಿಸುವ ತುಟಿಗಳು, ಕಾಲಲ್ಲಿ ಉದ್ದವಾದ ಬಿಳಿ ನಖಗಳು, ಎದೆ ಮೇಲೆ ಬಿಳಿ ಚಂದ್ರಾಕೃತಿ ಇದೆ.ಗೆದ್ದಲು ಹುತ್ತ ಇರುವೆ ಗೂಡುಗಳನ್ನು ಒಡೆದು ಮುಸುಡಿ ಒಳಸೇರಿಸಿ ಮಣ್ಣನ್ನು ಊದಿ ದೀರ್ಘಶ್ವಾಸದಿಂದ ಹುಳುಗಳನ್ನು ಹಿಂದೆಳೆದು ತಿನ್ನುತ್ತದೆ. ಇವುಗಳ ಮಲವನ್ನು ಪರೀಕ್ಷಿಸಿದರೆ ಇರುವೆಗಳೆ ಹೆಚ್ಚು ಕಂಡುಬರುತ್ತವೆ, ಗಡ್ಡೆ ಗೆಣಸು, ಹಣ್ಣುಗಳು, ಗೆದ್ದಲು, ಇರುವೆಗಳನ್ನು ತಿನ್ನುತ್ತವೆ, ಕೆಲವು ಸಲ ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುತ್ತವೆ, ಮರವನ್ನು ಏರುತ್ತವೆ, ಇಳಿಯುವಾಗ ಹಿಂದಿನಿಂದ ಜಾರುತ್ತವೆ. ಹೆಚ್ಚಾಗಿ ರಾತ್ರಿ ಸಂಚಾರಿ.1-2 ಮರಿಗಳನ್ನು ಹಾಕುತ್ತವೆ, ಆಹಾರಕ್ಕಾಗಿ ಅಲೆಯುವಾಗ ಮರಿಗಳನ್ನು ಬೆನ್ನ ಮೇಲೆ ಕೂರಿಸಿಕೊಳ್ಳುತ್ತವೆ. ದೀರ್ಘನಿದ್ರೆ ಮಾಡಬಲ್ಲವು. ಪಾದಗಳನ್ನು ನೆಕ್ಕುವ ಅಭ್ಯಾಸವಿದೆ. ಎಲ್ಲ ಪರಿಸರಕ್ಕೂ ಹೊಂದಿಕೊಂಡಿವೆ, ಬಯಲು ಸೀಮೆ, ಒಣ ಕಾಡು, ಎಲೆ ಉದುರುವ ಕಾಡು, ಪಶ್ಚಿಮ ಘಟ್ಟಗಳ ದಟ್ಟಡವಿಯಲ್ಲಿಯೂ ನೋಡಬಹುದು.

ಶ್ರೀಲಂಕಾ, ಭೂತಾನ್, ನೇಪಾಳ ಗಳಲ್ಲಿಯೂ ಕಾಣಿಸುತ್ತದೆ. ನಮ್ಮ ರಾಜ್ಯದಲ್ಲಿ ದರೋಜಿ ಕರಡಿ ಧಾಮ ಇವುಗಳಿಗೆ ಪ್ರಸಿದ್ದಿ.

ಇದು ಸಾಧು ಪ್ರಾಣಿಯಂತೆ ಕಂಡರೂ ಕೆಲವು ಸಲ ಉಗ್ರವಾಗಿ ವರ್ತಿಸುತ್ತದೆ, ಇದರ ಕಣ್ಣುಗಳು ಸ್ವಲ್ಪ ಮಂದವಿರುವುದರಿಂದ ಅಕಸ್ಮತ್ತಾಗಿ ಹತ್ತಿರ ಹೋದವರ ಅರಿವಾಗದೆ ಗಲಿಬಿಲಿಗೊಂಡು ಮನುಷ್ಯನ ಮೇಲೆರಗಿ,ಮುಖದ ಭಾಗವನ್ನೇ ಕಚ್ಚಿ ಹರಿಯುತ್ತವೆ.ಹೊಲ ಗದ್ದೆಗಳಲ್ಲಿ ಕರಡಿ ಕಂಡಾಗ ಸಮೀಪ ಹೋಗದೆ ದೂರದಿಂದಲೇ ಕೂಗಿ ಹೆದರಿಸುವುದು ಒಳ್ಳೆಯದು,ಇವುಗಳನ್ನು ಪಳಗಿಸಬಹುದು.

2) HIMALAYAN BROWN BEAR:

ಹಿಮಾಲಯದ ಕಂದು ಕರಡಿ ಇದು ನಮ್ಮ ದೇಶದಲ್ಲಿ ಕಂಡುಬರುವ ಕರಡಿಗಳಲ್ಲಿ ಅತೀ ದೊಡ್ಡದು ಗಂಡಿನ ತೂಕ ಸುಮಾರು 250 KG, ಗರಿಷ್ಠ ಸಸ್ಯಾಹಾರಿಯಾದರೂ, ದಂಶಕ, ಮೀನು,ಹುಳು, ಸತ್ತ ಪ್ರಾಣಿಗಳನ್ನು ತಿನ್ನುತ್ತವೆ. 1-2 ಮರಿಗಳನ್ನು ಹಾಕುತ್ತವೆ, ಕೆಲವು ತಿಂಗಳುಗಳ ಕಾಲ ಶಿಶಿರ ನಿದ್ರೆ ಮಾಡುತ್ತವೆ.

ಜಮ್ಮುಕಾಶ್ಮೀರ, ಹಿಮಾಚಲ ಪ್ರದೇಶ, ಲಡಾಕ್, ಉತ್ತರಖಾಂಡ್, ಅಲ್ಲದೆ ಟಿಬೆಟ್ ಪಾಕಿಸ್ತಾನ ಹಾಗು ನೇಪಾಳದಲ್ಲಿ ಕಾಣುತ್ತವೆ.

3) HIMALAYAN BLACK BEAR:

ಹಿಮಾಲಯದ ಕಪ್ಪು ಕರಡಿ, ಎದೆಯ ಮೇಲೆ ಅರ್ದ ಚಂದ್ರಾಕೃತಿ ಇರುವುದರಿಂದ ಮೂನ್ ಬೇರ್ ಅಂತಲೂ ಕರೆಯುತ್ತಾರೆ. ತೂಕ 90 -115, ಹೆಚ್ಚಾಗಿ ಮಾಂಸಾಹಾರಿಗಳು, ಚನ್ನಾಗಿ ಈಜಬಲ್ಲವು.ಹಿಮಾಲಯ, ಭೂತಾನ್ ,ಚೀನಾ, ನೇಪಾಳ ಪಾಕಿಸ್ತಾನಗಳಲ್ಲಿ ಕಾಣಿಸುತ್ತವೆ

4) MALAYAN SUN BEAR :

ಮಲಯದ ಸೂರ್ಯ ಕರಡಿ, ಎದೆಯ ಮೇಲೆ ಸೂರ್ಯ ಉದಯಿಸುವ ಹೊಂಬಣ್ಣದ ಅರ್ಧ ಚಂದ್ರಾಕೃತಿ ಇರುವುದರಿಂದ ಸೂರ್ಯ ಕರಡಿ ಎನ್ನುತ್ತಾರೆ. ನಮ್ಮ ದೇಶದಲ್ಲಿ ಕಂಡು ಬರುವ ಕರಡಿಗಳಲ್ಲಿ ಅತೀ ಚಿಕ್ಕದು, 25-65 KG ತೂಗುತ್ತವೆ, ದುಂಡನೆಯ ಚಿಕ್ಕ ಕಿವಿ ಹೊಂದಿವೆ, ಸ್ಲಾಥ್ ಕರಡಿಯಂತೆ ಆಹಾರ ಕ್ರಮವಿದೆ.ಈಶಾನ್ಯ ಭಾರತದ ಪರ್ವತಗಳಿಂದ, ಸುಮತ್ರಾ, ಬೋರ್ನಿಯಾವರೆಗೆ ವಿತರಣೆಗೊಂಡಿವೆ.

ಜಾಗತಿಕ ತಾಪಮಾನ ಹೆಚ್ಚಳದಿಂದ ಹಿಮಹಾಸುಗಳು ಕರಗುತ್ತಿರುವುದರಿಂದ ಹಿಮಕರಡಿಗಳ ಸಂತಾನ ಕುಸಿಯುತ್ತಿದೆ,ಕರಡಿಗಳ ಪಿತ್ತಕೋಶದಿಂದ (Gallbladder) ವಿವಿಧ ಔಷದ ತಯಾರಿಸಲು ಹಾಗು ಚರ್ಮಕ್ಕಾಗಿ ಇವುಗಳ ಹತ್ಯೆ ಮಾಡಲಾಗುತ್ತಿದೆ, ಆವಾಸ ನಾಶವೂ ಇವುಗಳನ್ನು ಅಪಾಯಕ್ಕೆ ಸಿಲುಕಿಸಿವೆ. ಕರಡಿಗಳೆಲ್ಲವೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆಗೊಳಪಟ್ಟಿವೆ.

ಲೇಖನ : ನಾಗರಾಜ್ ಬೆಳ್ಳೂರು, ನಿಸರ್ಗ ಕನ್ಜರ್ವೇಶನ್ ಟ್ರಸ್ಟ್
ಜಾಹಿರಾತು

LEAVE A REPLY

Please enter your comment!
Please enter your name here