ಜಾತಿ ಗಣತಿ : ಅಗತ್ಯ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಶಿಕ್ಷಕರ ಆಗ್ರಹ, ವಿವಿಧ ಬೇಡಿಕೆ ಈಡೇರಿಕೆಗಾಗಿ ದಿಢೀರ್ ಪ್ರತಿಭಟನೆ

Written by Mahesha Hindlemane

Published on:

ಹೊಸನಗರ ; ಇದೇ ಸೆ.22 ರಿಂದ ಅ.7ರವರೆಗೆ ಸರ್ಕಾರ ರಾಜ್ಯ ವ್ಯಾಪ್ತಿ ಜಾತಿಗಣತಿಗೆ ಮುಂದಾಗಿದ್ದು ಈ ಕಾರ್ಯಕ್ಕೆ ಸುಮಾರು 1.75 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿದೆ. ಆದರೆ, ಕಳೆದ ವಿಧಾನಸಭೆ ಹಾಗೂ ಸಂಸತ್ತ್ ಚುನಾವಣೆ ಸೇರಿದಂತೆ ವಿವಿಧ ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಶಿಕ್ಷಕರನ್ನು ಸರ್ಕಾರ ಬಳಸಿಕೊಂಡಿದ್ದರೂ ಸಂಬಂಧಪಟ್ಟ ಇಲಾಖೆಗಳು ಈವರೆಗೆ ಅವರಿಗೆ ನೀಡಬೇಕಿದ್ದ, ಹಾಜರಿಪತ್ರ, ಗೌರವಧನವನ್ನೇ ನೀಡಿಲ್ಲ ಎಂಬ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದಿವೆ.‌

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಹಿನ್ನೆಲೆಯಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಇಲ್ಲಿನ ಪದವಿಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ನೂರಾರು ಶಿಕ್ಷಕರು ಒಗ್ಗೂಡಿ ಇಲಾಖೆಗಳ ವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ದಿಢೀರ್ ಪ್ರತಿಭಟನೆಗೆ ಮುಂದಾದರು.

ಈ ವೇಳೆ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್ ಮಾತನಾಡಿ, ಸರ್ಕಾರದ ಯಾವುದೇ ಸಮೀಕ್ಷೆ, ಗಣತಿ ಕಾರ್ಯಕ್ಕೆ ಶಿಕ್ಷಕ ವರ್ಗವನ್ನೆ ಗುರಿ ಮಾಡಿಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಅಗತ್ಯ ಮಾಹಿತಿ ಜೊತೆಗೆ ದಾಖಲೆಗಳ ಸಂಗ್ರಹಕ್ಕೆ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಪ್ರಸ್ತುತ ಜನಗಣತಿ ಕಾರ್ಯದಲ್ಲಿ ಅನಾರೋಗ್ಯ ಪೀಡಿತ ಶಿಕ್ಷಕರನ್ನು ನೇಮಿಸಿರುವುದು ಅಕ್ಷಮ್ಯ. ಓರ್ವ ಶಿಕ್ಷಕನಿಗೆ ಜನಗಣತಿಗೆ ಕಾರ್ಯಕ್ಕೆ ಕನಿಷ್ಟ100 ಮನೆ ನಿಗದಿಪಡಿಸಬೇಕು. ಅಲ್ಲದೆ, ಆಯಾ ಶಾಲಾ ವ್ಯಾಪ್ತಿಗೆ ಅದೇ ಶಾಲೆಯ ಶಿಕ್ಷಕರನ್ನು ನೇಮಿಸಿ ಆದೇಶ ಹೊರಡಿಸಬೇಕು. ಜನಗಣತಿ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯ ನೀಡಬೇಕು ಎಂಬ ಹಲವು ಬೇಡಿಕೆಗಳ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.

ಮುಷ್ಕರ ಕೈ ಮೀರುವ ಹಂತ ತಲುಪುವುದನ್ನು ಮನಗಂಡು ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಕಲಾವತಿ ಸ್ಥಳಕ್ಕೆ ಭೇಟಿ ಶೀಘ್ರದಲ್ಲೇ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.‌

ಪ್ರಭಾರ ಬಿಇಒ ಚೇತನಾ ಮಾತನಾಡಿ, ಸೆ.18ರಂದು ನಡೆಯುವ ಎರಡನೇ ತರಬೇತಿ ಕಾರ್ಯಗಾರದ ಅವಧಿಯೊಳಗೆ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಇಲಾಖೆಯ ಗಮನ ಸೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದ ಬಳಿಕ ಶಿಕ್ಷಕರು ಮುಷ್ಕರ ತೊರೆದು ಜನಗಣತಿ ತರಬೇತಿ ಪ್ರಥಮ ಕಾರ್ಯಗಾರಕ್ಕೆ ಮರಳಿದರು.

ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿ ಕತ್ರಿಕೊಪ್ಪ, ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಬಸವಣ್ಯಪ್ಪ, ಶಿಕ್ಷಕರಾದ ಗಣೇಶ್, ಮಂಜಪ್ಪ, ಶಿಕ್ಷಕರ ಸಂಘ ಅನೇಕ ಪದಾಧಿಕಾರಿಗಳು ಹಾಜರಿದ್ದರು.

Leave a Comment