ಅನೇಕತೆಯಲ್ಲಿ ಏಕತೆ ಸಾಧಿಸುವುದೇ ಸಂಕ್ರಾಂತಿ :  ಕೋಣಂದೂರು ಬೃಹನ್ಮಠದಲ್ಲಿ ಕಾಶೀ ಜಗದ್ಗುರುಗಳು ಆಶೀರ್ವಚನ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಭಾರತದಲ್ಲಿ ಹಲವು ಜಾತಿ, ಮತ, ಭಾಷೆ, ಪ್ರದೇಶ, ವಿವಿಧ ಸಂಸ್ಕೃತಿಗಳಿದ್ದರೂ ಕೆಲವು ನಿಗದಿತ ಹಬ್ಬ ಹರಿದಿನಗಳ ಮೂಲಕ ಏಕತೆಯನ್ನು ಸಾಧಿಸುವ ಪರಿಪಾಠವನ್ನು ನಮ್ಮ ಋಷಿ-ಮುನಿಗಳು ಹಾಕಿಕೊಟ್ಟಿದ್ದಾರೆ. ಅನೇಕತೆಯಲ್ಲಿ ಏಕತೆ ಸಾಧಿಸುವುದೇ ನಿಜವಾದ ಸಂಕ್ರಾಂತಿ ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಬೃಹನ್ಮಠದಲ್ಲಿ ಹಮ್ಮಿಕೊಂಡಿದ್ದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಸಮಾರೋಪ ಮತ್ತು ಸಂಕ್ರಾಂತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಂಕ್ರಾಂತಿ ಹಬ್ಬದಂದು ಸಮುದ್ರ ಸ್ನಾನ, ಸಂಗಮ ಸ್ನಾನಗಳನ್ನು ಮಾಡಬೇಕೆಂಬ ನಿಯಮವಿದೆ. ಸಂಗಮ ಸ್ನಾನದ ಸಾಂಕೇತಿಕ ಅರ್ಥ ದೇಶ, ಧರ್ಮಕ್ಕಾಗಿ ಎಲ್ಲರೂ ಒಂದಾಗಿ ಹೋಗುವುದು ಎಂದರ್ಥ. ನದಿಗಳು ಭಿನ್ನ ಪ್ರದೇಶದಲ್ಲಿ ಹುಟ್ಟಿದರೂ ನಿಗದಿತ ಸ್ಥಳದಲ್ಲಿ ಸೇರಿದ ಮೇಲೆ ಅವು ಸಾಗರವನ್ನು ಸೇರುವವರೆಗೆ ಎಂದಿಗೂ ಮತ್ತೆ ಬೇರೆ ಆಗದಂತೆ ಕೂಡಿಕೊಂಡೇ ಹರಿಯುತ್ತವೆ. ಇಂತಹ ಏಕತೆಯನ್ನು ಮೈಗೂಡಿಸಿಕೊಳ್ಳುವುದಕ್ಕಾಗಿಯೇ ಸಂಗಮ ಸ್ನಾನ ಮಾಡುವ ಪದ್ದತಿ ರೂಢಿಗೆ ಬಂದಿದೆ. ಇಂದು ಕೋಣಂದೂರು ಮಠದಲ್ಲಿ ಕೂಡಾ ಭಕ್ತರ ಸಂಗಮ ಸ್ನಾನವನ್ನು ಮಾಡಿದ್ದಾರೆ. ಅದು ಹೇಗೆಂದರೆ ಇಲ್ಲಿರುವ ಹತ್ತಾರು ಶಿವಾಚಾರ್ಯರು ಒಂದೊಂದು ನದಿಗಳಿದ್ದಂತೆ ಅವರೆಲ್ಲರೂ ಕೂಡಿ ಸಮುದ್ರದೋಪಾದಿಯಲ್ಲಿ ಆಗಮಿಸಿರುವ ಜಗದ್ಗುರುಗಳ ಸಾನ್ನಧ್ಯವನ್ನು ಸೇರಿದ್ದಾರೆ. ಇಲ್ಲಿ ದೊರೆತ ಜ್ಞಾನ ಗಂಗೆಯಲ್ಲಿ ಮಿಂದು ನೀವೆಲ್ಲಾ ಜೀವನದಲ್ಲಿ ದೇಶ, ಧರ್ಮಕ್ಕಾಗಿ ಒಂದಾಗಿ ಸಾಗುವಂತೆ ಜಗದ್ಗುರುಗಳು ಭಕ್ತರಿಗೆ ಕರೆ ನೀಡಿದರು.

ಸಮಾರಂಭಕ್ಕೂ ಮುನ್ನ ಕಾಶೀ ಜಗದ್ಗುರುಗಳು ನಡೆಸಿದ ಸಾರ್ವಜನಿಕ ಇಷ್ಟಲಿಂಗ ಮಹಾಪೂಜೆಯಲ್ಲಿ ಭಕ್ತರು ಪಾಲ್ಗೊಂಡು ಗುರುಗಳ ಪಾದಪೂಜೆ ನೆರವೇರಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.

ಸಮಾರಂಭದಲ್ಲಿ ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಕ್ಯಾಸನೂರು, ಬನವಾಸಿ ಮತ್ತಿತರ ಮಠಗಳ ಶ್ರೀಗಳು, ಶಾಸಕ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಉದ್ಯಮಿ ಕೆ.ಆರ್.ಪ್ರಕಾಶ್, ಹಾರೋಹಿತ್ತಲು ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Comment