Balehonnuru

ಭಾರತೀಯ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರ ; ರಂಭಾಪುರಿ ಶ್ರೀ

ಬಾಳೆಹೊನ್ನೂರು ; ಆಧುನಿಕ ಯುಗದಲ್ಲಿ ಬೇಕಾದಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ಮಾನಸಿಕ ಶಾಂತಿ ಇಲ್ಲದಂತಾಗಿದೆ. ಜಾಗತೀಕರಣ ಉದಾರೀಕರಣ ಮತ್ತು ಖಾಸಗೀಕರಣ ಬೆಳೆದರಷ್ಟೇ ಸಾಲದು. ಮನುಷ್ಯನಲ್ಲಿ ಮಾನವೀಯ ಅಂತಃಕರಣಗಳು ಬೆಳೆದು ಬರಬೇಕಾಗಿದೆ. ಪವಿತ್ರ ಧರ್ಮ ಪಾಲನೆಯಿಂದ ಮುನ್ನಡೆಯಲು ಮತ್ತು ಸಂಸ್ಕೃತಿಯ ಸಂವರ್ಧನೆಗೆ ಮಹಿಳೆಯರ ಕೊಡುಗೆ ಅಪಾರವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಧರ್ಮ ಮತ್ತು ಮಹಿಳೆ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯ ಜೀವನದಲ್ಲಿ ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪರಮ ಪುರುಷಾರ್ಥಗಳು ಎಲ್ಲರಿಗೂ ಬೇಕು. ಜೀವನದ ವ್ಯವಸ್ಥಿತವಾದ ವಿಧಾನವೇ ಧರ್ಮ. ಸಕಲರ ಬಾಳಿನಲ್ಲಿ ಬಲವನ್ನು ತುಂಬಿ ತರುವುದು ಗುರುವಿನ ಪರಮ ಧರ್ಮವಾಗಿದೆ. ವೀರಶೈವ ಧರ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಗೌರವದ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ಧರ್ಮ ಸಂಸ್ಕೃತಿಯ ಅಳಿವು ಉಳಿವು ಮಹಿಳೆಯರನ್ನು ಅವಲಂಬಿಸಿದೆ. ಸಂಸ್ಕಾರಯುಕ್ತ ಮಹಿಳೆಯಿಂದ ಮನೆ-ಸಮಾಜ ಬೆಳೆಯಲು ಬಲಗೊಳ್ಳಲು ಸಾಧ್ಯವಾಗುತ್ತದೆ. ಸಂಸ್ಕೃತಿಯಿಂದ ವಿಮುಖನಾದರೆ ನಾಶ ಕಟ್ಟಿಟ್ಟ ಬುತ್ತಿ. ಮಾತೃ ದೇವೋ ಭವ ಅನ್ನುವ ಉತ್ಕೃಷ್ಟ ಮನೋಭಾವನೆಯನ್ನು ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುತ್ತಾ ಬಂದಿದೆ. ವೀರಶೈವ ಧರ್ಮ ಸಂಸ್ಕೃತಿಯಲ್ಲಿ ಪಂಚ ಪೀಠಗಳು ಮಹಿಳೆಯರಿಗೆ ಹಸಿರು ಬಳೆ, ಕುಂಕುಮ, ಕರಿಮಣಿಸರ, ಕಾಲುಂಗುರ, ಮೂಗುತಿ ಮತ್ತು ಮಾಂಗಲ್ಯ ಕುರುಹುಗಳನ್ನು ಕೊಟ್ಟ ಕೀರ್ತಿ ಸಲ್ಲುತ್ತದೆ ಎಂದರು.

ಧರ್ಮ ಮತ್ತು ಮಹಿಳೆ ವಿಚಾರ ಮಂಥನ ಸಮಾರಂಭವನ್ನು ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಇಂದಿನ ಆಧುನಿಕ ಕಾಲದಲ್ಲಿ ಮಹಿಳೆ ಪುರುಷನಿಗಿಂತ ಸಾಧನೆಯಲ್ಲಿ ಮುಂದೆ ಇರುವುದನ್ನು ಕಾಣುತ್ತೇವೆ. ಧರ್ಮ ಪರಂಪರೆ ಮತ್ತು ಆದರ್ಶಗಳನ್ನು ಪರಿಪಾಲಿಸಿ ಕೌಟುಂಬಿಕ ಶಾಂತಿ ನೆಮ್ಮದಿ ನೆಲೆಸುವುದರಲ್ಲಿ ಮಹಿಳೆಯರ ಪಾತ್ರ ಬಹು ದೊಡ್ಡದು. ಪ್ರಚಲಿತ ಸಂದರ್ಭದಲ್ಲಿ ಹೆಣ್ಣು ನಿರಂತರ ಆತಂಕಕ್ಕೆ ಕಾರಣರಾಗುತ್ತಿರುವುದು ನೋವಿನ ಸಂಗತಿ. ಅನ್ಯಾಯ ಅತ್ಯಾಚಾರ ದ್ರೋಹಗಳಿಂದಾಗಿ ನೆಮ್ಮದಿಗೆ ಭಂಗ ಉಂಟಾಗುತ್ತಿದೆ. ಮಹಿಳೆಯರು ಸತ್ಯವನ್ನು ಅರಿತು ಸನ್ಮಾರ್ಗದಲ್ಲಿ ನಡೆದರೆ ದುರ್ಘಟನೆಗಳು ನಡೆಯದೇ ಧರ್ಮದಿಂದಲೇ ಮಹಿಳೆಯರ ಉಜ್ವಲ ಭವಿಷ್ಯ ಅಡಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಟಿ.ಡಿ.ರಾಜೇಗೌಡರು ಮಾತನಾಡಿ ಶ್ರೀ ರಂಭಾಪುರಿ ಪೀಠ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ ಎಂದರು. ಹುಬ್ಬಳ್ಳಿ ಶ್ರೀ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಇಂಧುಮತಿ ಮಾನ್ವಿ, ಅಂಶುಮಂತ ಭಾಗವಹಿಸಿದ್ದರು.

ಕೊಟ್ಟೂರು ಚಾನುಕೋಟಿಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸ್ನೇಹ ಸೌಹಾರ್ದಗಳು ಭಾವೈಕ್ಯದ ಪ್ರತೀಕ. ಬಾಳೆಂಬ ಜ್ಯೋತಿಗೆ ಸ್ನೇಹ ಎಂಬ ತೈಲವನ್ನೆರೆದರೆ ಬಾಳೆಲ್ಲ ಬಂಧುರ. ಯಾರಿಂದಲೂ ನಿಂದಿಸಿಕೊಳ್ಳದ ಬಾಳ್ವೆಯೇ ನಿಜವಾದ ಬಾಳುವೆ ಎಂದು ನೃಪತುಂಗ ಕವಿ ಹೇಳಿದ್ದುಂಟು ಎಂದರು. ವಿಭೂತಿಪುರಮಠದ ಡಾ.ಮಹಾಂತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಇಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ರಾಜ್ಯ ಸರ್ಕಾರದಿಂದ ನಾಡಿನೆಲ್ಲೆಡೆ ಆಚರಿಸುತ್ತಿರುವುದು ಪ್ರತಿಯೊಬ್ಬ ವೀರಶೈವರಿಗೆ ಹೆಮ್ಮೆಯ ಸಂಗತಿಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವಸಿದ್ಧಾಂತಗಳು ಮಾನವ ಜೀವನದ ವಿಕಾಸಕ್ಕೆ ಅಡಿಪಾಯವಾಗಿವೆ. ಅರಿವಿನ ದಾರಿಯಲ್ಲಿ ಮುನ್ನಡೆಯಲು ಶ್ರೀಗುರುವಿನ ಮಾರ್ಗದರ್ಶನ ಅವಶ್ಯಕ. ಜಗದ ಕತ್ತಲೆ ಸೂರ್ಯ ಕಳೆದರೆ, ಮನದ ಕತ್ತಲೆ ಕಳೆಯಲು ಗುರು ಬೇಕು. ಶಿವ ಪಥವನರಿಯಲು ಗುರುವೇ ಮೂಲ ಎಂಬುದನ್ನು ಮರೆಯಬಾರದು ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಶಿರಕೋಳದ ಗುರುಸಿದ್ದೇಶ್ವರ ಶಿವಾಚಾರ್ಯರು, ಮೈಸೂರಿನ ಡಾ|| ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯರು, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯರು, ಅಮ್ಮಿನಬಾವಿ ಅಭಿನವ ಶಾಂತಲಿಂಗ ಶಿವಾಚಾರ್ಯರು, ಸಹಭಾಗಿತ್ವ ವಹಿಸಿದ್ದರು.

ಬೇರುಗಂಡಿಮಠದ ರೇಣುಕ ಮಹಾಂತ ಶಿವಾಚಾರ್ಯರು, ಶಾಂತಪುರದ ಶಿವಾನಂದ ಶಿವಾಚಾರ್ಯರು, ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು, ದೋರನಹಳ್ಳಿ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ಅಮ್ಮ ಫೌಂಡೇಶನ್ ಅಧ್ಯಕ್ಷ ಸುಧಾಕರ ಶೆಟ್ಟಿ, ಮೆಣಸುಕೂಡಿಗೆ ಎಂ.ಆರ್. ವೆಂಕಪ್ಪಗೌಡರು, ಅನ್ನಪೂರ್ಣಮ್ಮ ಶಿವರಾಮೇಗೌಡ, ಬಾಳೆಹೊನ್ನೂರಿನ ವಿದ್ಯಾನಂದ ಭಟ್, ಚಾರ್ಲ್ಸ್ ಮಸ್ಕರೆನಿಸ್ಸ, ಅಬ್ದುಲ್ ವಹೀದ್ ಬೈರೇಗುಡ್ಡ, ನಾಗರನವಿಲೆ ಶಿವಾನುಗ್ರಹ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು, ಅಜ್ಜಂಪುರದ ಹೆಚ್.ಆರ್.ಕುಮಾರ್ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಕೂಡ್ಲಗೆರೆ ಎಸ್.ಎಸ್.ಹಾಲೇಶ್ ಸ್ವಾಗತಿಸಿದರು.

ಹಾವೇರಿಯ ಶಿವಬಸವ ಬಣಕಾರ ಇವರಿಂದ ಪ್ರಾರ್ಥನೆ, ಶ್ರೀ ಪೀಠದ ಕುಮಾರಿ ವಂದನಾ ಹಿರೇಮಠ, ಅನಿತಾ ಸಿ.ಜಿ., ನೇಹಾ ಜೆ, ಧನ್ಯಾ ಇವರಿಂದ ಭರತ ನಾಟ್ಯ ಜರುಗಿತು. ಮುಖ್ಯೋಪಾಧ್ಯಾಯ ವೀರೇಶ ಕುಲಕರ್ಣಿ ನಿರೂಪಿಸಿದರು.

ಬೆಳಿಗ್ಗೆ ಶಯನೋತ್ಸವ, ಶ್ರೀ ಜಗದ್ಗುರು ಶಿವಾನಂದ ಎಸ್ಟೇಟಿನಲ್ಲಿ ಪೂಜಾ-ಪ್ರಸಾದ, ಸಂಜೆ ಗೋವಿನಕೋವಿ ಬಸವಣ್ಣ ದೇವರ ದೇವಸ್ಥಾನದಲ್ಲಿ ಕೆಂಡಾರ್ಚನೆ ನಡೆದವು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]