Balehonnuru

ಧರ್ಮ ವೃಕ್ಷದ ತಾಯ್ಬೇರು ಶ್ರೀ ಜಗದ್ಗುರು ರೇಣುಕಾಚಾರ್ಯರು ; ಶ್ರೀ ರಂಭಾಪುರಿ ಜಗದ್ಗುರುಗಳು

ಬಾಳೆಹೊನ್ನೂರು ; ಬದುಕಿನ ಉತ್ಕರ್ಷತೆ ಮತ್ತು ಶ್ರೇಯಸ್ಸಿಗೆ ಧರ್ಮಾಚರಣೆ ಮುಖ್ಯ. ಅರಿತು ಬಾಳುವುದರಿಂದ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತವಾಗುತ್ತದೆ. ವಿಶ್ವ ಬಂಧುತ್ವವನ್ನು ಸಾರಿದ ವೀರಶೈವ ಧರ್ಮ ವೃಕ್ಷದ ತಾಯ್ಬೇರಾಗಿ ಜೀವನ ದರ್ಶನದ ಅಮೂಲ್ಯ ಕೊಡುಗೆಯನ್ನು ಕೊಟ್ಟ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಭಾನುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಶಿವಾದ್ವೈತ ಸಮಾವೇಶ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸಕಲ ಜೀವರಾಶಿಗಳೀಗೆ ಸದಾ ಒಳಿತನ್ನೇ ಬಯಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಸತ್ಯ ಸಾಕ್ಷಾತ್ಕಾರ ಪಡೆದ ಪರಮಾಚಾರ್ಯರು. ಅವರ ನಡೆ ನುಡಿಗಳಲ್ಲಿ ಸತ್ಯದ ಬೆಳಕನ್ನು ಕಾಣುತ್ತೇವೆ. ಸತ್ಯವೇ ಅವರ ಜೀವನದ ಉಸಿರು ಹಸಿರು. ಜೀವ ಶಿವನಾಗುವ ಅಂಗ ಲಿಂಗವಾಗುವ ನರ ಹರನಾಗುವ ಭವಿ ಭಕ್ತನಾಗುವ ಆಧ್ಯಾತ್ಮ ಜ್ಞಾನವನ್ನು ಬೋಧಿಸಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಭಗವತ್ ಕ್ಷೇತ್ರದಲ್ಲಿ ಅರಳಿದ ಅಮರ ಪುಷ್ಪ ಅವರು. ಸತ್ಯಾನುಭೂತಿಗಾಗಿ ಸಮಸ್ತ ಜಗತ್ತನ್ನೇ ಸರಿಸಿ ಬಂದವರೇ ಶ್ರೀ ಜಗದ್ಗುರು ರೇಣುಕಾಚಾರ್ಯರು. ಬ್ರಹ್ಮಾಂಡವನ್ನು ಸೂರ್ಯ ಬೆಳಗಿದರೆ ಪಿಂಡಾAಡವನ್ನು ಪರಿಶುದ್ಧಗೊಳಿಸಿದ ಮಹಾತ್ಮರು ಜಾತಿ ಮತ ಪಂಥಗಳ ಗಡಿಯನ್ನು ಮೀರಿ ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಬೆಳೆಸಿದ್ದನ್ನು ಮರೆಯಲಾಗದು. ಧಾರ್ಮಿಕ ಜಾಗೃತಿಯ ಜೊತೆಗೆ ಸಾಮಾಜಿಕ ಸತ್ಕಾçಂತಿ ಎಸಗಿದ ಪ್ರಥಮಾಚಾರ್ಯರು. ಮಹಾಮುನಿ ಅಗಸ್ತ್ಯರಿಗೆ ಶಿವಾದ್ವೈತ ಸಿದ್ಧಾಂತ ಜ್ಞಾನವನ್ನು ಬೋಧಿಸಿ ಉದ್ಧರಿಸಿದ ಮಹಾನುಭಾವರು. ಅಷ್ಟಾವರಣ ಪಂಚಾಚಾರ ಮತ್ತು ಷಟ್ಸ್ಥಲಗಳ ಮೂಲಕ ಜೀವಾತ್ಮ ಪರಮಾತ್ಮನೆಡೆಗೆ ಕರೆದೊಯ್ಯುವ ಸನ್ಮಾರ್ಗ ತೋರಿದ ಶ್ರೀ ಜಗದ್ಗುರು ರೇಣುಕಾಚಾರ್ಯರನ್ನು ಸದಾ ಸ್ಮರಿಸುವ ಭಾವನೆ ಬೆಳೆದು ಬರಬೇಕಾಗಿದೆ. ವೀರಶೈವ ಧರ್ಮದ ಪ್ರಾಚೀನತೆ ಮತ್ತು ಪರಂಪರೆಯ ಜೊತೆಗೆ ಆಧುನಿಕ ಜೀವ ಜಗತ್ತಿಗೆ ಅನ್ವಯಿಸುವ ಜಾಗೃತ ವಿಚಾರಗಳನ್ನು ಹೊಂದಿದ ಶ್ರೇಷ್ಠ ಚಿಂತಕ ರವಿ ಹಂಜ್ ಅವರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿ ಕೊಟ್ಟಿರುವುದು ತಮಗೆ ತೃಪ್ತಿ ತಂದಿದೆ ಎಂದರು.

51 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ಕೆ ಭೂಮಿ ಪೂಜೆ ಸಲ್ಲಿಸಿ ಬಾಳೆಹೊನ್ನೂರು-ಶ್ರೀ ರಂಭಾಪುರಿ ಪೀಠದ ರಸ್ತೆ ಅನಾವರಣಗೊಳಿಸಿ ಶಿವಾದ್ವೈತ ಸಿದ್ಧಾಂತ ಸಮಾವೇಶ ಉದ್ಘಾಟಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಇದು ನನ್ನ ಜೀವನದ ಬಹು ದೊಡ್ಡ ಸೌಭಾಗ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಶಿವಾದ್ವೈತ ಸಮಾವೇಶ ಉದ್ಘಾಟಿಸುವ ಅಹೋಭಾಗ್ಯ ಪ್ರಾಪ್ತವಾಗಿರುವುದು ಗುರು ಭಕ್ತಿಯ ಶಕ್ತಿಯೇ ಕಾರಣವೆಂದು ನಂಬಿರುತ್ತೇನೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ದಾಂತಗಳು ಜೀವ ಜಗತ್ತಿನ ವಿಕಾಸಕ್ಕೆ ಅಡಿಪಾಯವಾಗಿವೆ. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ವಾಣಿಯನ್ನು ಯಾರೂ ಮರೆಯಲಾಗದು. ವೀರಗಂಗಾಧರ ಜಗದ್ಗುರುಗಳ ಆಶೀರ್ವಾದ ತಮ್ಮ ಬದುಕನ್ನೇ ಬದಲಾಯಿಸಿದೆ. ಧರ್ಮ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಅವಶ್ಯಕತೆಯಿದೆ. ಶ್ರೀ ರಂಭಾಪುರಿ ಪೀಠ ಕ್ರಿಯಾಕರ್ತೃತ್ವ ಶಕ್ತಿ ದೊಡ್ಡದು. ಇಂದು ಮಠದ ಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಸಹಕರಿಸುವೆ ಎಂದರು‌.

ಬಿ.ಜೆ.ಪಿ.ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ವೀರಶೈವ ಪಂಚ ಪೀಠಗಳು ರಾಷ್ಟ್ರೀಯ ಗುರು ಪೀಠಗಳಾಗಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರಿಂದ ಸಂಸ್ಥಾಪಿತಗೊಂಡ ಪೀಠವೇ ಶ್ರೀಮದ್ ರಂಭಾಪುರಿ ಪೀಠ. ಸಾಮರಸ್ಯ ಸೌಹಾರ್ದತೆಯ ಬದುಕಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಪಾರ. ಶ್ರೀ ರಂಭಾಪುರಿ ಜಗದ್ಗುರುಗಳು ಸಮಾಜವನ್ನು ತಿದ್ದಿ ತೀಡಿ ಜನತೆಯನ್ನು ಸನ್ಮಾರ್ಗದತ್ತ ಕರೆದೊಯ್ಯುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಸಮಾಜವನ್ನು ಒಡೆದಾಳುವ ನೀತಿಯನ್ನು ಧಿಕ್ಕರಿಸಿ ಒಗ್ಗಟ್ಟಿನಿಂದ ಒಂದಾಗಿ ಬಾಳುವ ಮೂಲಕ ಸಮಾಜದ ಹಿತದೃಷ್ಟಿಯಿಂದ ಮುಂದುವರಿಯೋಣ ಎಂದ ಅವರು ಮಲಯಾಚಲ ಸುಂದರ ಪರಿಸರದಲ್ಲಿ 51 ಅಡಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾಮಂಗಲ ಮೂರ್ತಿ ಸ್ಥಾಪನೆಗೊಳಿಸುವ ಕಾರ್ಯ ಪ್ರಾರಂಭವಾಗಿದ್ದು ಸಂತೋಷ ತಂದಿದೆ. ಈ ಮಹತ್ಕಾರ್ಯಕ್ಕೆ ನೆರವು ಸಹಕಾರ ಕೊಡುವುದಾಗಿ ಭರವಸೆಯಿತ್ತರು.

ಭಾರತ ಸರಕಾರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ, ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಸಕಲ ಜೀವ ರಾಶಿಗಳಿಗೆ ಒಳ್ಳೆಯದನ್ನು ಬಯಸುವುದೇ ಮಹಾತ್ಮರ ಜೀವನದ ಗುರಿಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಹಿಂದೂ ಸಂಸ್ಕೃತಿಯನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮುಕ್ಕೋಟಿ ಗುರು ರೂಪ ಧರಿಸಿ ಶ್ರೀ ಲಂಕೆಯಲ್ಲಿ 3 ಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕರಿಗಿದೆ. ಇಂದಿನ ಜಗದ್ಗುರುಗಳವರು ನಿರಂತರ ಸಂಚರಿಸಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಬೆಳೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಹೊರತಂದ ವೀರಶೈವ ಪರಂಪರೆ ಕೃತಿಯನ್ನು ಬಿಡುಗಡೆ ಮಾಡಿದ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ ನನ್ನ ಬಹು ಜನ್ಮದ ಪುಣ್ಯದ ಫಲವೆಂದು ಭಾವಿಸುವೆ. ವೀರಶೈವ ಲಿಂಗಾಯತ ಎರಡೂ ಒಂದೇ ಎಂಬುದು ನಮ್ಮ ಗಟ್ಟಿ ಧ್ವನಿಯಾಗಿರಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನ್ವಯಿಸುತ್ತವೆ ಶ್ರೀ ಜಗದ್ಗುರುಗಳವರ ಸತ್ಯ ಸಂಕಲ್ಪಗಳು ಸಾಕಾರಗೊಳ್ಳುವ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ಕೈಕೊಂಡ ಕಾರ್ಯ ಪೂರ್ಣಗೊಳ್ಳಲಿ. ಆ ಮಹತ್ಕಾರ್ಯಕ್ಕೆ ನನ್ನ ಸಹಕಾರ ಇದೆ ಎಂದರು.

ದಾವಣಗೆರೆ ನಗರದಲ್ಲಿ ಈ ಹಿಂದೆ ಪೀಠಾಚಾರ್ಯರ-ಶಿವಾಚಾರ್ಯರ ಶೃಂಗ ಸಮ್ಮೇಳನ ಅದ್ದೂರಿಯಾಗಿ ನೆರವೇರಿಸಿ ಕೊಟ್ಟ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ “ರಾಜಧರ್ಮ ಸೇವಾ ಸಂಜೀವಿನಿ” ಪ್ರಶಸ್ತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಅನುಗ್ರಹಿಸಿ ಆಶೀರ್ವದಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರಾದ ಸಾಹಿತ್ಯ ಸಂಶೋಧಕರಾದ ರವಿ ಹಂಜ್ ಅವರು ಮಾತನಾಡಿ, ವೀರಶೈವ ಧರ್ಮ ಸಾಹಿತ್ಯ ಅಪಾರವಾದುದು. ಸತ್ಯ ಸೈದ್ಧಾಂತಿಕ ನೆಲೆ ಮೂಲಗಳನ್ನು ಮರೆಯದೇ ಅವುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿದೆ. ವೀರಶೈವ ಧರ್ಮವನ್ನು ಛಿದ್ರಗೊಳಿಸುತ್ತಿರುವ ಕೆಲವರ ವರ್ತನೆ ಸರಿಯಾದುದಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿ ಎಲ್ಲ ಕ್ರಾಂತಿಗಳಿಗೆ ಸೆಲೆಯಾಗಿದೆ. ಸತ್ಯದ ನಿಲುವು ಗಟ್ಟಿಗೊಳಿಸುವ ಕಾರ್ಯವನ್ನು ನಾನು ಮಾಡುತ್ತಿದ್ದೇನೆ. ನನ್ನ ಪ್ರಯತ್ನವನ್ನು ಕಂಡು ಶ್ರೀ ರಂಭಾಪುರಿ ಜಗದ್ಗುರುಗಳು ಬಹು ದೊಡ್ಡ ಪ್ರಶಸ್ತಿ ಅನುಗ್ರಹಿಸಿವುರುವುದು ನನ್ನ ಪೂರ್ವ ಜನ್ಮದ ಸುಕೃತ ಮತ್ತು ಪೂರ್ವಜರ ಆಶೀರ್ವಾದ ಎಂದು ಭಾವಿಸುವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಶೋಧನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಸೇವೆ ಮುಂದುವರಿಸುತ್ತೇನೆ ಎಂದರು.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್. ಜೀವರಾಜ್, ಬೆಂಗಳೂರಿನ ಶಿವಶಂಕರಪ್ಪ ಸಾಹುಕಾರ್, ಹಾಸನದ ಸಿದ್ಧೇಶ್ ನಾಗೇಂದ್ರ ಭಾಗವಹಿಸಿದ್ದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ವಾಯ್ಸ್ ಆಫ್ ವೀರಶೈವ ಲಿಂಗಾಯತ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಕಾರ್ಯದರ್ಶಿ ಶಿವಗಂಗಾ ಕ್ಷೇತ್ರದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಸಹಭಾಗಿತ್ವ ವಹಿಸಿ ಮಾತನಾಡಿದರು.

ತರೀಕೆರೆಯ ಕೂಡ್ಲೂರು ಬಸಪ್ಪ ಶಿವಮೂರ್ತಿ, ತುಮಕೂರಿನ ಬಿ.ಫಾಲಾಕ್ಷಯ್ಯ, ಬೆಂಗಳೂರಿನ ನಾಗರತ್ನ ಗಣೇಶ್ ಕುಮಾರ, ಸ್ನೇಹ ಶ್ರೀ ಶಿವಕುಮಾರಯ್ಯ ಎನ್., ಕೊಲ್ಲಾಪುರದ ಶಾಂತಮ್ಮ-ಶ್ರೀ ಪರಮೇಶ್ವರಯ್ಯ, ಕನ್ನಳ್ಳಿಯ ಎಸ್.ಶಾಂತರಾಜು, ಸಿದ್ಧಲಿಂಗಸ್ವಾಮಿ ಜಿ. ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಹುಬ್ಬಳ್ಳಿಯ ಪ್ರಕಾಶ ಬೆಂಡಿಗೇರಿ ಸ್ವಾಗತಿಸಿದರು. ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಯ ಹಾಲುಸ್ವಾಮಿ ಮತ್ತು ತಂಡದವರು ಭರತ ನಾಟ್ಯ ಪ್ರದರ್ಶನ ನೀಡಿದರು. ಶಿವಮೊಗ್ಗದ ಶಾಂತಾ ಆನಂದ ಹಾಗೂ ಸವಣೂರಿನ ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ಶಿಲಾನ್ಯಾಸ ಭೂಮಿ ಪೂಜೆ:

ಸಮಾರಂಭಕ್ಕೂ ಮುನ್ನ 51 ಅಡಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಶಿಲಾ ಮೂರ್ತಿ ಪ್ರತಿಷ್ಠಾಪನೆಯ ಶಿಲಾನ್ಯಾಸ ಭೂಮಿ ಪೂಜೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೆರವೇರಿಸಿದ ನಂತರ ಬಾಳೆಹೊನ್ನೂರು-ಶ್ರೀ ರಂಭಾಪುರಿ ಪೀಠದ ಮೂಲಕ ಮೇಲ್ಪಾಲ್ ರಸ್ತೆ ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ ಪೀಠದ ನೂತನ ಪುಷ್ಕರಣಿಯನ್ನು ಕೇಂದ್ರದ ಮತ್ತು ರಾಜ್ಯದ ಸಚಿವರು, ಸಂಸದರು, ಶಾಸಕರು, ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ಸಮಾರಂಭದ ನಂತರ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]