ನೆಟ್‌ವರ್ಕ್ ಸಮಸ್ಯೆಯಿಂದ ಸಕಾಲಕ್ಕೆ ಸಿಗದ ಆಂಬುಲೆನ್ಸ್ ; ಆಸ್ಪತ್ರೆ ತಲುಪುವ ಮುನ್ನವೇ ಬಾಣಂತಿ ಸಾವು !

Written by Mahesha Hindlemane

Published on:

ತೀರ್ಥಹಳ್ಳಿ ; ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದ ಬಾಣಂತಿಯೊಬ್ಬರು ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ ಎಂಬಲ್ಲಿ ನಡೆದಿದೆ. ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಆಂಬುಲೆನ್ಸ್ ಸಂಪರ್ಕಿಸಲು ಸಾಧ್ಯವಾಗದ ಕಾರಣ ಈ ಅಕಾಲಿಕ ಸಾವು ಸಂಭವಿಸಿದೆ ಎಂಬ ಕಹಿ ಸತ್ಯ ಹೊರಬಂದಿದೆ.

WhatsApp Group Join Now
Telegram Group Join Now
Instagram Group Join Now

ಘಟನೆಯ ವಿವರ ;

📢 Stay Updated! Join our WhatsApp Channel Now →

ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮದ ಪೋಸ್ಟ್ ಮಾಸ್ಟರ್ ಮಂಜುನಾಥ್ ಅವರ ಪತ್ನಿ ಕಾವ್ಯ (29) ಮೃತ ದುರ್ದೈವಿ. ಹೆರಿಗೆಯ ನಂತರ ಕಾವ್ಯ ಅವರು ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಮದ ಚಿಕ್ಕನಹಳ್ಳಿ ತವರು ಮನೆಯಲ್ಲಿದ್ದರು. ಆದರೆ, ಜನವರಿ 1ರಂದು ಅವರಿಗೆ ಜನಿಸಿದ ಮಗು ಕೂಡ ಸಾವನ್ನಪ್ಪಿತ್ತು. ಮಗುವಿನ ಸಾವಿನಿಂದ ಕಾವ್ಯ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ತೀವ್ರ ಕುಗ್ಗಿದ್ದರು ಎಂದು ಹೇಳಲಾಗಿದೆ.

ಮೊಬೈಲ್ ನೆಟ್‌ವರ್ಕ್ ಸಮಸ್ಯೆಯೇ ಮುಳುವಾಯಿತೇ?

ಕಾವ್ಯ ಅವರಿಗೆ ತೀವ್ರ ಕಾಲು ನೋವು ಕಾಣಿಸಿಕೊಂಡ ತಕ್ಷಣ, ಕುಟುಂಬಸ್ಥರು ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್‌ಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ದೇಮ್ಲಾಪುರ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದ್ದ ಕಾರಣ ಆಂಬುಲೆನ್ಸ್ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಸಮಯ ವ್ಯರ್ಥವಾಗಬಾರದೆಂದು ಕುಟುಂಬದವರು ತಕ್ಷಣವೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಆದರೆ ದುರದೃಷ್ಟವಶಾತ್ ಆಸ್ಪತ್ರೆ ತಲುಪುವ ಮೊದಲೇ ಕಾವ್ಯ ಕೊನೆಯುಸಿರೆಳೆದಿದ್ದಾರೆ.

ತಹಸೀಲ್ದಾರ್ ಭೇಟಿ, ತನಿಖೆ ;

ವಿಷಯ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ‘ಮದುವೆಯಾದ 7 ವರ್ಷದೊಳಗೆ ಮಹಿಳೆಯರು ಮೃತಪಟ್ಟರೆ ನಿಯಮದಂತೆ ಮರಣೋತ್ತರ ಪರೀಕ್ಷೆ ಮತ್ತು ಕೂಲಂಕಷ ತನಿಖೆ ನಡೆಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ಆಯಾಮಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ಮಗು ಸಾವಿನ ಬೆನ್ನಲ್ಲೇ ತಾಯಿಯೂ ಮೃತಪಟ್ಟಿರುವುದು ಇಡೀ ಮೇಳಿಗೆ ಮತ್ತು ದೇಮ್ಲಾಪುರ ಗ್ರಾಮಗಳಲ್ಲಿ ನೀರವ ಮೌನ ಆವರಿಸುವಂತೆ ಮಾಡಿದೆ.

Leave a Comment