ಶಿವಮೊಗ್ಗ ; ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯ ಮಲೆಶಂಕರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸಂಬಂಧಿಸಿದ ಕುಂದುಕೊರತೆ ಆಲಿಸಲು ಸ್ಥಳೀಯ ಕಚೇರಿ ತೆರೆಯಲು ನಿರ್ಧರಿಸಲಾಗಿದೆ ಎಂದು ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ತಬ್ರೇಝ್‌ಆಲಂ ಶರೀಫ್ ತಿಳಿಸಿದರು.
ಮಲೆಶಂಕರದಲ್ಲಿ ಮೇ ತಿಂಗಳಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದ ಕುರಿತು ಚರ್ಚಿಸಲು ಜಿಲ್ಲಾಡಳಿತ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ನಂತರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಮಲೆಶಂಕರಕ್ಕೆ ತಾವು ಖುದ್ದು ಭೇಟಿ ನೀಡಿ ಅಲ್ಲಿನ ಕುಡಿಯುವ ನೀರಿನ ಸಮಸ್ಯೆ, ಬುಡಕಟ್ಟು ಜನಾಂಗದ ಕುಂದುಕೊರತೆ ಸೇರಿದಂತೆ ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಕ್ರಮ ಕೈಗೊಳ್ಳಲಾಗುವುದು. ಹಾಗೂ ಮೇ ಮಾಹೆಯಲ್ಲಿ ಒಂದು ಕಾರ್ಯಕ್ರಮ ಮಾಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದ ಅವರು ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿಸಲು ಸ್ಥಳೀಯರು ಬೆಂಗಳೂರಿಗೆ ಬರುವುದು ಕಷ್ಟವಾಗುತ್ತದೆ. ಆದ್ದರಿಂದ ಕುಂದು ಕೊರತೆಯನ್ನು ಆಲಿಸಲು ಸ್ಥಳೀಯವಾಗಿ ಕಚೇರಿಯನ್ನು ಸ್ಥಾಪಿಸಲಾಗುವುದು ಎಂದರು.
ದೇಶದ ಪಶ್ಚಿಮ ಘಟ್ಟಗಳನ್ನು ಹೊಂದಿರುವ 6 ರಾಜ್ಯಗಳ ಪೈಕಿ ನಮ್ಮ ರಾಜ್ಯವೇ ಪಶ್ಚಿಮ ಘಟ್ಟಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ. ಹಾಗೂ ಸಂರಕ್ಷಣೆಗಾಗಿ ಸಮಿತಿ ರಚಿಸಿದ ಮೊದಲ ರಾಜ್ಯವಾಗಿದ್ದು, 2008 ರಲ್ಲಿ ಈ ಸಮಿತಿ ರಚನೆಯಾಗಿದೆ. ವನ್ಯಜೀವಿ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನಗಳನ್ನು ಘೋಷಿಸುವ ಮೂಲಕ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸಲಾಗುತ್ತಿದೆ.
ತಾವು ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದ್ದು, ಇದರಲ್ಲಿ ಮುಖ್ಯವಾಗಿ ಪ್ಲಾಸ್ಟಿಕ್ ನಿಷೇಧಕ್ಕಾಗಿ ಗ್ರೀನ್ ಚೆಕ್ ಪೋಸ್ಟ್ ಗಳ ಸ್ಥಾಪನೆ, ಪ್ಲಾಸ್ಟಿಕ್ ಬಳಕೆ ಮಿತಗೊಳಿಸುವ ನಿಯಮಗಳು ಮತ್ತು ಪಶ್ಚಿಮ ಘಟ್ಟ ಮ್ಯೂಸಿಯಂ ಇನ್ಸ್ಟಿಟ್ಯೂಟ್ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಮುಖ್ಯವಾಗಿ ಯುವಜನತೆಯಲ್ಲಿ ಅರಿವು ಮೂಡಿಸುವುದು, ನಿಯಮಗಳ ರಚನೆ ಹಾಗೂ ಕತ್ತಲೆ ಕಾಡು ಸಂರಕ್ಷಣೆ ಗೆ ಒತ್ತು ನೀಡಲಾಗುತ್ತಿದ್ದು, ಕತ್ತಲೆ ಕಾನನ್ನು ಹೆರಿಟೇಜ್ ಸೈಟ್ ಆಗಿ ಘೋಷಿಸುವಂತೆ ಜೀವ ವೈವಿಧ್ಯ ಮಂಡಳಿಗೆ ಪತ್ರ ಬರೆಯಲಾಗಿದೆ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲು ಪೋಸ್ಟ್ ಕಾರ್ಡ್ ಬಿಡುಗಡೆಗೊಳಿಸಲಾಗಿದೆ ಹಾಗೂ ಇತ್ತೀಚಿಗೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹೋಂ ಸ್ಟೇ, ರೆಸಾರ್ಟ್ ಸ್ಥಾಪನೆ ಕುರಿತು ಡೇಟಾ ಬೇಸ್ ಸಂಗ್ರಹಿಸಿ, ಅಲ್ಲಿ ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಎಸ್ ಓ ಪಿ ಯನ್ನು ತರಲಾಗುವುದು ಎಂದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ವಿಷಯಕ್ಕೆ ಸಂಬಂಧಿಸಿದಂತೆ ಉಚ್ಚನ್ಯಾಯಾಲಯ ಸ್ಟೇ ನೀಡಿದೆ. ಪಶ್ಚಿಮ ಘಟ್ಟಗಳಿಗೆ ಹಾನಿ ಉಂಟು ಮಾಡುವ ಯಾವುದೇ ಯೋಜನೆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದ ಅವರು ಹುಲಿಕಲ್ ಘಾಟಿ ಸಮಸ್ಯೆ ಕುರಿತು ಅರಿಯಲು ತಾವು ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.
ಜೀವವೈವಿಧ್ಯ ಉಳಿವಿಗೆ ಸೂಕ್ಷ್ಮ ಪ್ರದೇಶಗಳನ್ನು ಘೋಷಿಸುವ ಉದ್ದೇಶ ಹೊಂದಿದ್ದು ಸುಸ್ಥಿರ ಪ್ರವಾಸೋದ್ಯಮ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಪ್ರವಾಸೋದ್ಯಮ, ಗಣಿ ಮತ್ತು ಭೂವಿಜ್ಞಾನ ಹಾಗೂ ಅರಣ್ಯ ಇಲಾಖೆಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.
ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಜ್ಜಯ್ಯ ಮಾತನಾಡಿ, ಜಿಲ್ಲೆಯಲ್ಲಿ 4 ಅರಣ್ಯ ವಿಭಾಗ, 3 ಪ್ರಾದೇಶಿಕ ವಿಭಾಗಗಳಿದ್ದು ಒಟ್ಟು 420 ಹೆಕ್ಟೇರ್ ಅರಣ್ಯ ಭೂಮಿ ಇದೆ. ಅದರಲ್ಲಿ 363 ಹೆ. ಸೂಚಿತ ಅರಣ್ಯವಿದ್ದು ಒಟ್ಟು ಶೇ. 39 ಅರಣ್ಯ ಹೊಂದಿದ್ದೇವೆ. ಮೂರು ವನ್ಯಜೀವಿ ಅಭಯಾರಣ್ಯ ಇದೆ. ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ, ಶರಾವತಿ ಅಭಯಾರಣ್ಯ ಹಾಗೂ ಗುಡವಿ ಪಕ್ಷಿಧಾಮವಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಪ್ರಸನ್ನ ಕೃಷ್ಣ ಪಟಗಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





