ಹೊಸನಗರ (ರಿಪ್ಪನ್ಪೇಟೆ) : ಸಾಗರ-ತೀರ್ಥಹಳ್ಳಿ ಮಾರ್ಗಕ್ಕೆ ಇಂದು ಎರಡು ಸರ್ಕಾರಿ ಬಸ್ ಸಂಚಾರಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಖಾಸಗಿ ಬಸ್ ಏಜೆಂಟರ ಮತ್ತು ಕಾಂಗ್ರೆಸ್ ಮುಖಂಡರ ಮಧ್ಯ ಮಾತಿನ ಚಕಮಕಿ ನಡೆದು ಕೈ-ಕೈ ಮಿಲಾಯಿಸುವ ಹಂತ ತಲುಪಿದ್ದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರ ಮಧ್ಯ ಪ್ರವೇಶದಿಂದ ಶಾಂತಗೊಂಡ ಘಟನೆ ಹೊಸನಗರ ತಾಲೂಕಿನ ರಿಪ್ಪನ್ಪೇಟೆಯಲ್ಲಿ ನಡೆದಿದೆ.
ಇಂದು ವಿನಾಯಕ ವೃತ್ತದಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲೊಂದಾದ ಶಕ್ತಿ ಯೋಜನೆಯಡಿ ಇಂದು ಸಾಗರದಿಂದ ರಿಪ್ಪನ್ಪೇಟೆ ಮಾರ್ಗವಾಗಿ ತೀರ್ಥಹಳ್ಳಿ ಕಡೆ ರಾಜ್ಯ ಸಾರಿಗೆ ಸಂಸ್ಥೆಯಿಂದ ಬಸ್ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಉದ್ಘಾಟನೆ ಮಾಡಿದ ಕೆಲವೇ ಕ್ಷಣದಲ್ಲಿ ರಿಪ್ಪನ್ಪೇಟೆಯ ಖಾಸಗಿ ಬಸ್ ಏಜೆಂಟರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ನಿರ್ವಾಹಕ ಮಧ್ಯ ಪ್ರಯಾಣಿಕರನ್ನು ಹತ್ತಿಸುವ ವಿಚಾರದಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿದ ಬೆನ್ನಲ್ಲೇ ಕೈ-ಕೈ ಮಿಲಾಯಿಸುವ ಹಂತ ತಲುಪಿದ್ದು ಕಂಡು ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಕಡೆಯವರನ್ನು ಸಮಾಧಾನಪಡಿಸುವಲ್ಲಿ ಹರಸಾಹಸ ಪಡುಬೇಕಾಯಿತು.

ಬಹು ದಿನಗಳ ಬೇಡಿಕೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಂದಿಸಿ ಮಲೆನಾಡಿನ ಸಾಗರ – ಆನಂದಪುರ – ರಿಪ್ಪನ್ಪೇಟೆ ಮಾರ್ಗವಾಗಿ ತೀರ್ಥಹಳ್ಳಿ ಕಡೆಗೆ ಹೋಗುವ ಮತ್ತು ಬರುವ ಮಹಿಳೆಯರಿಗೆ ಸರ್ಕಾರದ ಶಕ್ತಿ ಯೋಜನೆಯ ಸೌಲಭ್ಯವನ್ನು ನೀಡುವಂತೆ ಕೇಳಿಕೊಂಡ ಮೇರೆಗೆ ಸ್ಪಂದಿಸಿದ ಅವರು ಇಂದಿನಿಂದ ಸರ್ಕಾರಿ ಸಾರಿಗೆ ಬಸ್ ಸೌಲಭ್ಯವನ್ನು ಒದಗಿಸಲಾಗಿದ್ದು ಖಾಸಗಿ ಏಜೆಂಟರ ಆಕ್ಷೇಪಣೆಯಿಂದಾಗಿ ಶಕ್ತಿ ಯೋಜನೆಯಿಂದ ದೂರ ಉಳಿಯುವಂತಾಗಿದೆ ಎಂದು ಹಲವರು ತೀವ್ರ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷ ಚಿದಂಬರ, ಎಪಿಎಂಸಿ ಮಾಜಿ ಹೆಚ್.ವಿ.ಈಶ್ವರಪ್ಪಗೌಡ, ರವೀಂದ್ರ ಕೆರೆಹಳ್ಳಿ, ಶ್ರೀನಿವಾಸ್ ಆಚಾರ್, ಡಿ.ಈ.ಮಧುಸೂದನ್, ಗಣಪತಿ, ಇಸ್ಮಾಯಿಲ್, ಇನ್ನಿತರರು ಇದ್ದರು.