RIPPONPETE | ಕೆರೆಹಳ್ಳಿ, ಹುಂಚ ಹೋಬಳಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಜೂನ್ ಒಂದರಿಂದ ಜುಲೈ 19ರವರೆಗೆ ಪ್ರಸ್ತುತ 874.4 ಮಿ.ಮೀ ಮಳೆಯಾಗಿದ್ದು ಜೂನ್ 1 ರಿಂದ ಜುಲೈ 19 ವರೆಗೆ ವಾಡಿಕೆ ಮಳೆ 797.55 ಮಿ.ಮೀ. ಇದೆ. ವಾಡಿಕೆಗಿಂತ 76.9 ಮಿ.ಮೀ. ಹೆಚ್ಚು ಮಳೆಯಾಗಿದೆ ಎಂದು ರಿಪ್ಪನ್‌ಪೇಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶರಣಗೌಡ ಬಿರದಾರ್ ತಿಳಿಸಿದರು.
ರಿಪ್ಪನ್‌ಪೇಟೆ ರೈತ ಸಂಪರ್ಕ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರದ ಸಹಾಯಧನದಡಿಯಲ್ಲಿ ಬಿತ್ತನೆ ಬೀಜಗಳ ವಿತರಣೆ ದಾಸ್ತಾನು ಮಾಡಿಕೊಳ್ಳಲಾಗಿ ಮಲೆನಾಡಿನ ಹವಾಮಾನಕ್ಕೆ ಅನುಗುಣವಾಗುವಂತಹ ತಳಿಗಳಾದ ಅಭಿಲಾಷ, ಎಂಟಿಯು 1001, ಅರ್.ಎನ್.ಆರ್ ತಳಿಗಳು ಸೇರಿದಂತೆ ಇಲ್ಲಿಯವರೆಗೆ ಒಟ್ಟು 160 ಕ್ವಿಂಟಾಲ್ ಭತ್ತದ ಬೀಜವನ್ನು ವಿತರಣೆ ಮಾಡಲಾಗಿದೆ. 2440 ಕೆ.ಜಿ ಮುಸುಕಿನ ಜೋಳದ ಬೀಜವನ್ನು ಸಹ ಸಹಾಯಧನದಡಿಯಲ್ಲಿ ಮಾರಾಟ ಮಾಡಲಾಗಿದೆ. ಅಂದಾಜು ಬೆಳೆ ವಿಸ್ತೀರ್ಣ ಮುಸುಕಿನ ಜೋಳ 750 ಎಕರೆ ಹೋಬಳಿ ವ್ಯಾಪ್ತಿಯಲ್ಲಿ ಭತ್ತ ಸುಮಾರು ಶೇ. 85 ರಷ್ಟು ಭೂ ಪ್ರದೇಶದಲ್ಲಿ ಸಸಿ ಮಡಿ ತಯಾರಿಸಲಾಗಿ ಶೇ. 10 ರಷ್ಟು ಪ್ರದೇಶದಲ್ಲಿ ನಾಟಿ ಕಾರ್ಯ ಮಾಡಲಾಗಿದೆ ಎಂದ ಅವರು, ಇಲಾಖೆಯಡಿ ಹನಿ ನೀರಾವರಿ ಯೋಜನೆಗೆ ಉತ್ತೇಜಿಸುವ ಉದ್ದೇಶದಿಂದ ಸರ್ಕಾರದ ಸಹಾಯಧನದಡಿ ಸ್ಪಿಂಕ್ಲರ್ ಪೈಪ್‌ಗಳಿಗೆ ರೈತ ಫಲಾನುಭವಿಗಳಿಂದ ಅರ್ಜಿ ಪಡೆಯಲಾಗುತ್ತಿದೆ. ಕೃಷಿ ಯಾಂತ್ರಿಕರಣ ಯೋಜನೆಯಡಿ ಪವರ್‌ಟಿಲ್ಲರ್, ಪವರ್ ಸ್ಪ್ರೇಯರ್, ಯಂತ್ರಚಾಲಿತ ಕೈಗಾಡಿ, ಔಷಧಿ ಸಿಂಪರಣೆ ಯಂತ್ರ, ಕಳೆಕತ್ತರಿಸುವ ಯಂತ್ರ, ಡಿಸೇಲ್ ಪಂಪ್‌ಸೆಟ್‌ಗಳು, ರೋಟೋವೇಟರ್, ಲೆವೆಲ್ಲರ್, ಕಲ್ಟಿವೇಟರ್, ಸೇರಿದಂತೆ ವಿವಿಧ ಟ್ರ್ಯಾಕ್ಟರು ಉಪಕರಣಗಳ ರಿಪೇರ್, ಹಿಟ್ಟಿನಗಿರಣಿ, ಎಣ್ಣೆಗಾಣ, ಭತ್ತ ಕಟಾವು ಯಂತ್ರ, ಭತ್ತ ಒಕ್ಕಲು ಯಂತ್ರಗಳಿಗೆ ಆಸಕ್ತ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಮತ್ತು ವಿತರಿಸಲಾಗುತ್ತಿದೆ. ಎಂದರು.
ಹುಂಚ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 6100 ಹೆಕ್ಟರ್ ಭೂ ಪ್ರದೇಶವಿದ್ದು 990 ಹೆಕ್ಟರ್ ಭತ್ತ ಬೆಳೆಯುವ ಪ್ರದೇಶ 11 ಹೆಕ್ಟರ್ ಮೆಕ್ಕೆಜೋಳ ಪ್ರದೇಶವಾಗಿದೆ. ಉಳಿದಂತೆ ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ದಪ್ಪ ಆಭಿಲಾಷ, ಆರ್.ಎನ್.ಆರ್, 1001 ತಳಿಗಳು ಭತ್ತದ ಬೆಳೆಗೆ ಬೇಕಾದ ರೋಗ ಮತ್ತು ಕೀಟ ನಾಶಕಗಳು ಲಭ್ಯವಿದೆ ಎಂದು ತಿಳಿಸಿ, ಜುಲೈ 17 ರವರೆಗೆ ಒಟ್ಟು ಮಳೆ 1406 ಮಿ.ಮೀ. ಈ ವರ್ಷದಲ್ಲಿ ಮಳೆಯಾಗಿದ್ದು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಹೊಸನಗರ ಕೃಷಿ ಅಧಿಕಾರಿ ಎಂ.ಎಸ್.ಮಾರುತಿ, ಹುಂಚ ರೈತ ಸಂಪರ್ಕ ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ರವಿಕುಮಾರ್, ಸೈಯದ್‌ಸಾಬ್, ರೈತಸಂಪರ್ಕ ಕೇಂದ್ರದ ಸಿಬ್ಬಂದಿ ರಾಜೇಶ್, ಹಾಜರಿದ್ದರು.