SHIVAMOGGA ; ಮಲೆನಾಡಿಗರ ಭಾರೀ ವಿರೋಧದ ನಡುವೆಯು ಬೆಂಗಳೂರಿನ ಜನರ ದಾಹ ತೀರಿಸಲು ಸರ್ಕಾರ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ಸೇರುತ್ತಿರುವ ಶರಾವತಿ ನದಿ ನೀರಿನ ಮೇಲೆ ಕಣ್ಣಿಟ್ಟಿದೆ. ಈ ಬಗ್ಗೆ ಕಾರ್ಯ ಸಾಧ್ಯತೆ ವರದಿ ಪಡೆಯಲು ಸರ್ಕಾರ ಮುಂದಾಗಿದೆ. ಬೆಂಗಳೂರಿಗೆ ಶರಾವತಿ ನೀರು ತರುವ ಯೋಜನೆಗೆ ಮಲೆನಾಡಿಗರು, ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಹೌದು, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ನದಿಗೆ ಲಿಂಗನಮಕ್ಕಿ ಬಳಿ ಜಲಾಶಯ ನಿರ್ಮಿಸಲಾಗಿದೆ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮ ದಿಕ್ಕಿಗೆ ಹರಿಯುವ ಪ್ರಮುಖ ನದಿಗಳಲ್ಲಿ ಶರಾವತಿ ನದಿಯೂ ಒಂದು. ರಾಜ್ಯದ ಅತಿದೊಡ್ಡ ಜಲಾಶಯಗಳಲ್ಲಿ ಲಿಂಗನಮಕ್ಕಿ ಜಲಾಶಯವು ಒಂದು. 151.75 ಟಿಎಂಸಿ ಸಾಮರ್ಥ್ಯ ಹೊಂದಿರುವ ಜಲಾಶಯ ಇದಾಗಿದೆ. 1962 ರಲ್ಲಿ ಈ ಜಲಾಶಯ ನಿರ್ಮಿಸಲಾಗಿದೆ. ಜಲಾಶಯ ನಿರ್ಮಾಣವಾದ 60 ವರ್ಷದಲ್ಲಿ ಈ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಕೇವಲ 12 ಬಾರಿ ಮಾತ್ರ. ಲಿಂಗನಮಕ್ಕಿ ಜಲಾಶಯವನ್ನು ಜಲ ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡಿದ್ದು, ರಾಜ್ಯದ ಶೇ.30 ರಷ್ಟು ಕತ್ತಲೆಯನ್ನು ಈ ಜಲಾಶಯ ನೀಗಿಸುತ್ತಿದೆ. ಅಂದರೆ ಶೇ.30 ರಷ್ಟು ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸಿ ನೀಡುತ್ತಿದೆ. ಆದರೆ ಇತ್ತೀಚೆಗೆ ಮಿತಿಮೀರಿ ಬೆಳೆಯುತ್ತಿರುವ ಬೆಂಗಳೂರಿಗೆ ಕಾವೇರಿ ನೀರು ಸಾಲದಾಗಿದೆ. ಹಾಗಾಗಿ ಅಂತರರಾಜ್ಯ ಸಮಸ್ಯೆ ಇಲ್ಲದ ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದಿಂದ 15 ಟಿಎಂಸಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ತಾಂತ್ರಿಕ ಮತ್ತು ಆರ್ಥಿಕ ಯೋಜನೆಯ ಕಾರ್ಯ ಸಾಧ್ಯತೆಯ ವರದಿ ತಯಾರಿಸಲು ಈಐ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಸರ್ಕಾರ ಟೆಂಡರ್ ನೀಡಿದೆ. ಇನ್ನು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ನೀರು ತೆಗೆದುಕೊಂಡು ಹೋದ್ರೆ ಹೋಗಲಿ ಎಂದಿದ್ದಾರೆ.
ಇನ್ನೂ 2018 ರಲ್ಲಿಯೂ ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತರುವ ಪ್ರಸ್ತಾಪ ಮಲೆನಾಡಿನ ಜನರ ಮತ್ತು ಮಠದಿಶಾರು ಅಂದಿನ ಶಾಸಕ ಹರಾತಾಳು ಹಾಲಪ್ಪ ಅವರ ವಿರೋಧದಿಂದ ಯೋಜನೆ ಕೈ ಬಿಡಲಾಗಿತ್ತು. ಆದರೆ ಇದೀಗ ಈ ಪ್ರಸ್ತಾಪ ಮುನ್ನಲೆಗೆ ಬಂದಿದೆ. ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವುದಕ್ಕೆ ಜಿಲ್ಲೆಯ ಪರಿಸರವಾದಿಗಳು, ಬಿಜೆಪಿ ಮುಖಂಡರುಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಜಾರಿಯಾದರೇ ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗುತ್ತದೆ. ವನ್ಯಜೀವಿ ಪ್ರಭೇದ ನಾಶವಾಗುತ್ತದೆ. ಅಲ್ಲದೇ ಜಿಲ್ಲೆಯಲ್ಲೇ ಇರುವ ಗ್ರಾಮಗಳಿಗೆ, ನಗರ ಪ್ರದೇಶಕ್ಕೆ ಶರಾವತಿಯಿಂದ ನೀರು ಕೊಡಲು ಸಾಧ್ಯವಾಗಿಲ್ಲ. ಇನ್ನೂ ಬೆಂಗಳೂರಿಗೆ ಕೊಡಲು ಸಾಧ್ಯವೇ ? ಎಂದು ಹರಾತಾಳು ಹಾಲಪ್ಪ ಪ್ರಶ್ನಿಸಿದ್ದಾರೆ.
ಒಟ್ಟಾರೆ, ಶರಾವತಿ ನದಿ ನೀರು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಗೆ ಆರಂಭದಲ್ಲೇ ವಿರೋಧ ವ್ಯಕ್ತವಾಗಿದೆ. ಈ ಯೋಜನೆ ಕೈಬಿಡದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲು ಮಲೆನಾಡಿಗರು ಚಿಂತನೆ ನಡೆಸುತ್ತಿದ್ದಾರೆ, ಹಾಗಾಗಿ ಸರ್ಕಾರ ಸಾಧಕ ಭಾದಕ ಪರಿಶೀಲನೆ ನಡಸಲಿ ಎನ್ನುವುದೇ ಸಾರ್ವಜನಿಕರ ಆಗ್ರಹವಾಹಿದೆ.