ರಾಷ್ಟ್ರದ್ರೋಹಿಗಳಿಗೆ ಕಾಂಗ್ರೆಸ್ ರಕ್ಷಣೆ‌ ; ಆರಗ ಜ್ಞಾನೇಂದ್ರ ಗಂಭೀರ ಆರೋಪ

Written by malnadtimes.com

Updated on:

RIPPONPETE ; ರಾಷ್ಟ್ರದ್ರೋಹಿ ಕೆಲಸ ಮಾಡುವ ಗಲಭೆ, ದೋಂಬಿ, ಅಶಾಂತಿ ನಿರ್ಮಾಣ ಮಾಡುವವರಿಗೆ ಕಾಂಗ್ರೆಸ್ ರಕ್ಷಣೆ ನೀಡುವ ಕೆಲಸ ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ಕೋಮು ಗಲಭೆ ಲೂಟಿ ಮಾಡಿದಂತಹ 180ಕ್ಕೂ ಅಧಿಕ ಮಂದಿಯ ಮೇಲೆ ದಾಖಲಾದ ಪ್ರಕರಣವನ್ನು ರಾಜ್ಯ ಸರ್ಕಾರ ಏಕಾಏಕಿ ಹಿಂದೆ ಪಡೆದಿರುವುದು ಅಕ್ಷಮ್ಯ ಇದು ದೇಶಕ್ಕೆ ಮಾಡಿದಂತಹ ದ್ರೋಹವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು.

WhatsApp Group Join Now
Telegram Group Join Now
Instagram Group Join Now

ಸರ್ಕಾರವು ಮತ ಬ್ಯಾಂಕ್‌ಗಾಗಿ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವುದು ಶೋಚನೀಯ ಎಂದು ಭಾನುವಾರ ಸಂಜೆ ರಿಪ್ಪನ್‌ಪೇಟೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2022 ರಲ್ಲಿ ನಾನು ಗೃಹ ಸಚಿವನಾಗಿದ್ದ ಅವಧಿಯಲ್ಲಿ ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಪೋಸ್ಟೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಘಟನೆಗೆ ಸಂಬಂಧಿಸಿದಂತೆ ಹಿಂದೂ ಯುವಕನೊಬ್ಬನನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿತ್ತು. ಈ ಬಗ್ಗೆ ಪೊಲೀಸ್ ಇಲಾಖೆ ತಗೆದುಕೊಂಡ ದಿಟ್ಟ ಕ್ರಮದ ಬಗ್ಗೆ ಮುಸ್ಲಿಂ ಸಮುದಾಯದ ಮುಖಂಡರಿಗೂ ಮನವರಿಕೆ ಮಾಡಿಕೊಡಲಾಗಿತ್ತು. ತದನಂತರವೂ ಒಂದು ಕೋಮಿನ ಸುಮಾರು 3 ಸಹಸ್ರಕ್ಕೂ ಅಧಿಕ ಮಂದಿ ಏಕಾಏಕಿ ಬೀದಿಗಿಳಿದು ಠಾಣೆಯ ಬಳಿ ಜಮಾಯಿಸಿ ಇಲಾಖೆಯ ವಾಹನವನ್ನು ಅಡ್ಡಹಾಕಿ ದಾಂಧಲೆ ನಡೆಸಿದ ಘಟನೆ ಪೂರ್ವಯೋಜಿತಸಂಚಾಗಿತ್ತು. ಆಗ ಈ ಘಟನೆಯ ಕುರಿತು ನನ್ನ ವಿರುದ್ದ ಹರಿಹಾಯ್ದವರೇ ಇಂದು ಆರೋಪಿಗಳ ರಕ್ಷಣೆಗೆ ಮುಂದಾಗಿರುವುದು ವಿಪರ್ಯಾಸ ಎಂದರು.

ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿದ್ದು ಈಗ ಕೋವಿಡ್ ವಿಚಾರದಲ್ಲಿ ತನಿಖೆ ನಡೆಸುವುದಾಗಿ ನಮ್ಮಗಳನ್ನು ಹೆದರಿಸುವ ಗುಮ್ಮನನ್ನು ಬಿಡುತ್ತಿದ್ದಾರೆಂದು ವ್ಯಂಗ್ಯವಾಡಿದರು.

ರೈತರ ನೆರವಿಗೆ ಸರ್ಕಾರ ಮುಂದಾಗಲಿ‌ ;

ಮಲೆನಾಡಿನ ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳಿಗೆ ಕಂದುಜಿಗಿ ಹುಳು ಮತ್ತು ಬೆಂಕಿರೋಗದ ಭಾದೆ ಹಾಗೂ ಅಡಿಕೆ ತೋಟದಲ್ಲಿ ಕೊಳೆರೋಗ ಗಿಡಗಳಿಗೆ ಫಂಗಸ್ ರೋಗದಿಂದಾಗಿ ರೈತರು ಕಂಗಾಲಾಗಿದ್ದು ಸರ್ಕಾರ ಕೂಡಲೇ ರೈತರ ನೆರವಿಗೆ ಮುಂದಾಗುವ ಮೂಲಕ ಭತ್ತದ ಗದ್ದೆಗಳಲ್ಲಿ ಕಾಣಿಸಿಕೊಂಡಿರುವ ಕಂದುಜಿಗಿ ಹುಳು ಬೆಂಕಿರೋಗಕ್ಕೆ ಡ್ರೋನ್ ಮೂಲಕ ಔಷಧಿ ಸಿಂಪಡಿಸಿ ಹತೋಟಿಗೆ ಮುಂದಾಗುವಂತೆ ಈ ಸಂದರ್ಭದಲ್ಲಿ ಸರ್ಕಾರವನ್ನು ಆಗ್ರಹಿಸಿದರು.

ಮುಖಂಡರಾದ ಆರ್.ಟಿ.ಗೋಪಾಲ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಎ.ಟಿ.ನಾಗರತ್ನ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಮಹಾಶಕ್ತಿಕೇಂದ್ರದ ಅಧ್ಯಕ್ಷ ಎನ್.ಸತೀಶ್, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಆರ್.ರಾಘವೇಂದ್ರ, ಸುಂದರೇಶ್, ಕಗ್ಗಲಿ ಲಿಂಗಪ್ಪ, ಜಿ.ಡಿ.ಮಲ್ಲಿಕಾರ್ಜುನ, ಮೆಣಸೆ ಆನಂದ, ರಾಮಚಂದ್ರ ಹರತಾಳು ಇನ್ನಿತರರು ಹಾಜರಿದ್ದರು.

Leave a Comment