ತರೀಕೆರೆ ; ತಂದೆಯ ಸಾವಾದರೂ ಮಗಳಿಗೆ ಈ ವಿಚಾರ ತಿಳಿಯದಂತೆ ಮುಚ್ಚಿಟ್ಟು ಸೂತಕದ ನಡುವೆಯೇ ಕುಟುಂಬಸ್ಥರು ಮದುವೆಯನ್ನು ನೆರವೇರಿಸಿರುವಂತಹ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರ ಪಟ್ಟಣದಲ್ಲಿ ನಡೆದಿದೆ.
ಹೌದು, 45 ವರ್ಷದ ಚಂದ್ರು ಅವರು ತಮ್ಮ ಮಗಳ ಮದುವೆ ಹಿನ್ನೆಲೆ ಹಿಂದಿನ ದಿನ ಉತ್ಸಾಹದಿಂದ ಓಡಾಡಿಕೊಂಡಿದ್ದರು. ನಿನ್ನೆ ಬೆಳಗ್ಗೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಆಮಂತ್ರಣ ಪತ್ರಿಕೆಯನ್ನು ಕೊಡಲು ಹೋದಾಗ ಅಲ್ಲಿ ಭೀಕರ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ. ಆದರೆ ತಂದೆ ಸಾವನ್ನಪ್ಪಿದ್ದಾರೆ ಎಂದು ಮಗಳು ತಿಳಿದರೆ, ಎಲ್ಲಿ ಮದುವೆಯನ್ನು ನಿಲ್ಲಿಸುತ್ತಾಳೊ ಎಂಬ ಭಯದಿಂದ ಕುಟುಂಬ್ಥರು ಈ ವಿಚಾರವನ್ನು ಮುಚ್ಚಿಟ್ಟು ಮದುವೆ ಮಾಡಿಸಿದ್ದಾರೆ. ಅಪ್ಪ ಎಲ್ಲಿ ಎಂದು ಕೇಳಿದರೆ, ಅವರಿಗೆ ಮದುವೆಗೆ ಓಡಾಡಿ ಸುಸ್ತಾಗಿದೆ, ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿ ವಿವಾಹವನ್ನು ನೆರವೇರಿಸಿದ್ದಾರೆ.
ಎಲ್ಲಾ ಮದುವೆ ಶಾಸ್ತ್ರ ಮುಗಿಯುವ ತನಕ ಆಸ್ಪತ್ರೆಯಲ್ಲೇ ಇಡಲಾಗಿದ್ದ ಚಂದ್ರು ಮೃತದೇಹವನ್ನು ಮನೆಗೆ ರವಾನಿಸಿ ಬಳಿಕ ಸಾವಿನ ಸುದ್ದಿಯನ್ನು ತಿಳಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ನವ ಜೋಡಿ ಹಾಗೂ ಸಂಬಂಧಿಕರು ಮದುವೆ ಮಂಟಪದಿಂದ ಮನೆಗೆ ಓಡೋಡಿ ಹೋಗಿದ್ದಾರೆ. ಮದುವೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಪತ್ನಿ-ಮಗಳ ಆಕ್ರಂದನ ಮುಗಿಲು ಮುಟ್ಟಿದೆ.