ರಿಪ್ಪನ್‌ಪೇಟೆ ; ವಿದ್ಯಾರ್ಥಿಗಳು ಭವಿಷ್ಯ ರೂಪಿಸುವ ಇಂದಿನ ಸಮಯದಲ್ಲಿ ವ್ಯಾಸಂಗಕ್ಕೆ ಪ್ರಶಾಂತ ವಾತಾವರಣ ಹಾಗೂ ಏಕಾಗ್ರತೆ ಅಗತ್ಯವಾಗಿದೆ ಎಂದು ಮಾಜಿ ಶಾಸಕ, ವೈದ್ಯರತ್ನ ಡಾ. ಜಿ.ಡಿ.ನಾರಾಯಣಪ್ಪ ಸಲಹೆ ನೀಡಿದರು.
ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಹಾಗೂ ಮನೆಗಳಲ್ಲಿ ಹಾಗೂ ಶುಭಸಮಾರಂಭಗಳಲ್ಲಿನ ಶಬ್ದ ಮಾಲಿನ್ಯವು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಪ್ರೌಢ, ಪದವಿ ಹಾಗೂ ವೃತ್ತಿಪರ ಕೋರ್ಸ್‌ಗಳ ಜೊತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕಾಲಘಟ್ಟದಲ್ಲಿ ಪೋಷಕವರ್ಗ ಸೂಕ್ಷ್ಮ ವಿಚಾರಗಳನ್ನು ಗಮನಿಸಬೇಕು ಎಂದರು.
ಗ್ರಾಮ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ನಡೆಯುವ ಅದ್ದೂರಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಮೆರವಣಿಗೆಗಳಿಗೆ ಕಡಿವಾಣ ಹಾಕಬೇಕು. ಮೊಬೈಲ್ ಫೋನ್‌ಗಳಲ್ಲಿ ವಿಡಿಯೋ, ರೀಲ್ಸ್, ಗೇಮ್‌ಗಳ ಕಡೆಗೆ ಮಕ್ಕಳು ಚಿತ್ತಹರಿಸದಂತೆ ಪೋಷಕರು ನೋಡಿಕೊಳ್ಳಬೇಕು. ಅದೇ ರೀತಿ ಮನೆಯಲ್ಲಿ ಟಿವಿ ಅಬ್ಬರದ ಶಬ್ದ ಮಾಲಿನ್ಯ ಕಡಿಮೆ ಮಾಡಿ ವೀಕ್ಷಿಸುವುದರಿಂದ ಮಕ್ಕಳ ಮಾನಸಿಕ ಒತ್ತಡ ಅತಂಕ ದೂರ ಮಾಡಲು ಸಾದ್ಯವೆಂದರು.
ಲೇಖನವನ್ನು ಮುಂದುವರಿಸಿ ಓದಿ
ಈ ಪರೀಕ್ಷಾ ಅವಧಿಯಲ್ಲಿ ನಾಗರಿಕರು ಸ್ವಯಂ ನಿಯಂತ್ರಣಕ್ಕೆ ಒಳಪಡುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸ್ಥಳೀಯ ಆಡಳಿತ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕು. ಜಾಗೃತಿ ಅಭಿಯಾನಗಳ ಮೂಲಕ ಪರೀಕ್ಷಾ ಸಮಯ ಶಾಂತತೆ ನಮ್ಮ ಕರ್ತವ್ಯ ಎಂಬ ಘೋಷವಾಕ್ಯದ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದರು.
ವಿದ್ಯಾರ್ಥಿಗಳ ಯಶಸ್ಸು ಕೇವಲ ಅವರ ಪರಿಶ್ರಮವಲ್ಲ ಸಮಾಜದ ಸಹಕಾರವೂ ಅವಲಂಬಿತವಾಗಿದೆ. ಇಂದಿನ ಜಾಗೃತ ನಡೆ ನಾಳೆಯ ಜವಾಬ್ದಾರಿಯು ಸಮಾಜ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಅರಿವು ನಾಗರೀಕರಲ್ಲಿ ಮೂಡಬೇಕು ಎಂದರು.

