ರಿಪ್ಪನ್‌ಪೇಟೆ : ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆಸಾನಿ ಗ್ರಾಮದ ಬಳಿ ಗಾಳಿ ಮತ್ತು ಮಳೆಯಿಂದಾಗಿ ಬೃಹತ್ ಗಾತ್ರದ ಮರ ಧರೆಗುರುಳಿ ತರಗತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಅಮೃತ (ಗರ್ತಿಕೆರೆ) ಸ.ಪ.ಪೂ.ಕಾಲೇಜ್‌ನ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಹಿರಿಸಾನಿ ಗ್ರಾಮದ ಶೇಖರಪ್ಪ ಎಂಬುವರ ಪುತ್ರಿ ನಿಖಿತಾ ಗಾಯಗೊಂಡ ವಿದ್ಯಾರ್ಥಿನಿ. ಈಕೆ ಶುಕ್ರವಾರ ಸಂಜೆ ತನ್ನ ಇಬ್ಬರು ಗೆಳತಿಯರೊಂದಿಗೆ ಮನೆಗೆ ತೆರಳುತ್ತಿದ್ದಾಗ ಗಾಳಿ-ಮಳೆಯಿಂದಾಗಿ ವಿದ್ಯುತ್ ಲೈನ್‌ವೈರ್‌ಗಳು ನೆಲಕ್ಕೆ ಬಿದ್ದಿದ್ದು, ಆತಂಕದಿಂದ ಹಿಂದಕ್ಕೆ ಓಡಲು ಯತ್ನಿಸಿದರು. ಆದರೆ ಆ ಸಮಯದಲ್ಲಿ ರಸ್ತೆಯ ಬದಿಯಲ್ಲಿದ್ದ ದೊಡ್ಡ ಮರವು ಆಕೆಯ ಮೇಲೆ ಉರುಳಿ ಬಿದ್ದಿತು. ಪರಿಣಾಮವಾಗಿ, ನಿಖಿತಾಳ ಎಡಗಾಲು ಸಂಪೂರ್ಣ ಮುರಿದು ಗಂಭೀರವಾಗಿ ಗಾಯಗೊಂಡಿದ್ದಾಳೆ.

ನಿಖಿತಾಳ ಚೀರಾಟವನ್ನು ಕೇಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ, ಅವಳನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಗಾಯದ ತೀವ್ರತೆಗೆ ಗಮನಿಸಿ, ತುರ್ತು ಶಸ್ತ್ರಚಿಕಿತ್ಸೆಗೆ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸುವ ಸಲಹೆ ನೀಡಿದರು.
ನೆರವಿನ ಭರವಸೆ :
ಗಾಯಗೊಂಡಿರುವ ವಿದ್ಯಾರ್ಥಿನಿ ನಿಖಿತಾಳ ಹೆಚ್ಚಿನ ಶಸ್ತ್ರ ಚಿಕಿತ್ಸೆಗಾಗಿ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ.

