ಹೊಸನಗರ : ಪಟ್ಟಣದಲ್ಲಿ ನಿರಂತರವಾಗಿ ಕಾಡುತ್ತಿರುವ ವಿದ್ಯುತ್ ವ್ಯತ್ಯಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವಿದ್ಯುತ್ ಬಿಲ್ ಪಾವತಿಸದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೊಸನಗರ ವರ್ತಕರ ಸಂಘ ಎಚ್ಚರಿಕೆ ನೀಡಿದೆ.
ಈ ಸಂಬಂಧ ವರ್ತಕರ ಸಂಘದ ಪದಾಧಿಕಾರಿಗಳು ಇಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
ಪಟ್ಟಣದಲ್ಲಿ ಪದೇಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ವ್ಯಾಪಾರ-ವಹಿವಾಟಿಗೆ ಮಾತ್ರವಲ್ಲದೆ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೂ ತೀವ್ರ ತೊಂದರೆಯಾಗುತ್ತಿದೆ. ವಿದ್ಯುತ್ ವ್ಯತ್ಯಯದಿಂದ ವ್ಯಾಪಾರಸ್ಥರು ಹಲವು ರೀತಿಯ ನಷ್ಟ ಎದುರಿಸುತ್ತಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ವರ್ತಕರು ಒತ್ತಾಯಿಸಿದರು.
ಬಿಲ್ ಪಾವತಿಸದೆ ಪ್ರತಿಭಟನೆ :
ವಿದ್ಯುತ್ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ವರ್ತಕರು ವಿದ್ಯುತ್ ಬಿಲ್ ಪಾವತಿಸದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಂಘದ ಪದಾಧಿಕಾರಿಗಳು ಶಾಸಕರ ಗಮನಕ್ಕೆ ತಂದರು.
ಮೆಸ್ಕಾಂ ಎಂಡಿ ಜೊತೆ ನೇರ ಚರ್ಚೆಗೆ ಅವಕಾಶ :
ವರ್ತಕರ ಅಹವಾಲು ಸ್ವೀಕರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಕ್ಷೇತ್ರದ ವಿದ್ಯುತ್ ಸಮಸ್ಯೆ ಬಗೆಹರಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಭರವಸೆ ನೀಡಿದರು.
ಈ ಕುರಿತು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರನ್ನು (MD) ಖುದ್ದಾಗಿ ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದ ಅವರು, ಶೀಘ್ರದಲ್ಲೇ ಮೆಸ್ಕಾಂ ಎಂಡಿ ಅವರನ್ನು ಹೊಸನಗರಕ್ಕೆ ಕರೆತಂದು ವರ್ತಕರು ಹಾಗೂ ಸಾರ್ವಜನಿಕರೊಂದಿಗೆ ‘ನೇರಾನೇರ ಚರ್ಚೆ’ ನಡೆಸಲು ಅವಕಾಶ ಕಲ್ಪಿಸುವುದಾಗಿ ಹೇಳಿದರು.
ಅಲ್ಲದೆ, ಹೊಸನಗರದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯುತ್ ಗ್ರಿಡ್ ನಿರ್ಮಾಣಕ್ಕಾಗಿ ಈಗಾಗಲೇ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲು, ಪ್ರಮುಖ ಪದಾಧಿಕಾರಿಗಳಾದ ಹರೀಶ್ ರಾವ್, ಸುರೇಶ್ ಬಿ.ಎಸ್., ಸಂತೋಷ್ ಶೇಟ್, ಲೋಕೇಶ್ ಆದುವಳ್ಳಿ, ಹರೀಶ್ ಹರ್ಷ, ನರಸಿಂಗರಾಮ್ ಪಟೇಲ್, ಉದಯ್ ಕುಮಾರ್, ವಿಠಲ್ ರಾವ್, ಭೋಜಪ್ಪ ಗೌಡ, ನಿಖಿಲ್, ಗೌತಮ್, ರವಿ ಶೆಟ್ರು, ಪವನ್ ಚಂದ್ರಶೇಖರ್, ನೇತ್ರಾವತಿ, ವೆಂಕಟೇಶ್, ಗಣಪತಿ ಭಟ್, ಲಕ್ಷ್ಮೀಶ ಸೇರಿದಂತೆ ಸಂಘದ ಹಲವು ಸದಸ್ಯರು ಉಪಸ್ಥಿತರಿದ್ದರು.

