ಹೊಸನಗರ : “ಯಾವುದೇ ಒಂದು ರಾಷ್ಟ್ರವು ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ, ಅಲ್ಲಿನ ಶಿಕ್ಷಕರ ಕೊಡುಗೆ ಬಹಳ ಮುಖ್ಯವಾಗಿರುತ್ತದೆ. ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಮ್ಮ ಶಿಕ್ಷಕರ ಕಾರ್ಯ ಶ್ಲಾಘನೀಯ” ಎಂದು ಸಾಗರ-ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಬಣ್ಣಿಸಿದರು.
ಸೋಮವಾರ ಪಟ್ಟಣದ ಆರ್ಯ ಈಡಿಗ ಭವನದಲ್ಲಿ ಆಯೋಜಿಸಲಾಗಿದ್ದ ‘ಭಾರತ ರತ್ನ ಡಾ. ಎಸ್. ರಾಧಾಕೃಷ್ಣನ್ ಅವರ 138ನೇ ಜನ್ಮದಿನೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಅಜ್ಞಾನದ ಕತ್ತಲೆಯನ್ನು ಅಳಿಸಿ, ಜ್ಞಾನದ ಬೆಳಕನ್ನು ಪಸರಿಸುವ ಗುರುವಿನ ಋಣವನ್ನು ಯಾರಿಂದಲೂ ತೀರಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಸ್ಫೂರ್ತಿ ತುಂಬುವ ಶಿಕ್ಷಕರು ನಮ್ಮೊಂದಿಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ಶಾಲೆಗೆ ಮರಳಿಸುವ ಶಿಕ್ಷಕರಿಗೆ ಬಹುಮಾನ:
ಶಿಕ್ಷಣದಿಂದ ಯಾವುದೇ ಮಗು ವಂಚಿತರಾಗಬಾರದು. ಹೀಗಾಗಿ, ಶಾಲೆಯಿಂದ ಹೊರಗುಳಿದಿರುವ ಅಥವಾ ಶಾಲೆ ಬಿಟ್ಟ ಮಕ್ಕಳನ್ನು ಪತ್ತೆಹಚ್ಚಿ ಮರಳಿ ಶಾಲೆಗೆ ಕರೆತರುವ ಶಿಕ್ಷಕರಿಗೆ ತಮ್ಮ ವತಿಯಿಂದ ₹10 ಸಾವಿರ ನಗದು ಬಹುಮಾನ ನೀಡುವುದಾಗಿ ಶಾಸಕರು ಘೋಷಿಸಿದರು.
ಗುರುಭವನ ಹಾಗೂ ಜೀಪ್ ಭರವಸೆ:
ತಾಲೂಕು ಶಿಕ್ಷಕರ ಬಹುದಿನಗಳ ಬೇಡಿಕೆಯಾಗಿರುವ ‘ಗುರುಭವನ’ ನಿರ್ಮಾಣಕ್ಕೆ ಸರ್ಕಾರ ಮತ್ತು ಶಾಸಕರ ನಿಧಿಯಿಂದ ಅನುದಾನ ಒದಗಿಸುವ ಭರವಸೆ ನೀಡಿದರು. ಹಾಗೆಯೇ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸುಗಮ ಸಂಚಾರಕ್ಕಾಗಿ ಜೀಪ್ ಒದಗಿಸಲಾಗುವುದು. ಆದರೆ, ಪ್ರತಿಯಾಗಿ ತಾಲೂಕಿನ ಶಿಕ್ಷಣ ಮಟ್ಟವನ್ನು ರಾಜ್ಯದಲ್ಲೇ ಮೊದಲ ಸ್ಥಾನಕ್ಕೆ ತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕಿವಿಮಾತು ಹೇಳಿದರು.
ಶಿಕ್ಷಕರಿಗೆ ತಂದೆ-ತಾಯಿಯ ಸ್ಥಾನ ನೀಡಿ ಗೌರವಿಸಿ:
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಬಿ. ಚಿದಂಬರ ಮಾತನಾಡಿ, “ಮಕ್ಕಳೊಂದಿಗೆ ಪ್ರೀತಿ-ವಾತ್ಸಲ್ಯದಿಂದ ಬೆರೆತು, ಅವರಿಗೆ ಒಳಿತು-ಕೆಡುಕುಗಳ ವ್ಯತ್ಯಾಸವನ್ನು ತಿಳಿಸಿಕೊಡುವವರೇ ನೈಜ ಶಿಕ್ಷಕರು. ವಿದ್ಯಾರ್ಥಿಗಳು ತಮ್ಮ ಗುರುವೃಂದವನ್ನು ಹೆತ್ತವರಂತೆ ಭಾವಿಸಿ, ಜೀವನದುದ್ದಕ್ಕೂ ಅವರನ್ನು ಸ್ಮರಿಸುವ ಮತ್ತು ಗೌರವಿಸುವ ಕೆಲಸ ಮಾಡಬೇಕು” ಎಂದರು.

ಬೋಧನೇತರ ಹೊರೆ ಕಡಿಮೆ ಮಾಡಲು ಆಗ್ರಹ :
ಹೊಸನಗರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರಿಗೆ ಪಾಠಕ್ಕಿಂತ ಹೆಚ್ಚಾಗಿ ಸರ್ಕಾರದ ಇತರ ಕೆಲಸಗಳಾದ ಲೆಕ್ಕ ಬರೆಯುವುದು, ತರಕಾರಿ ತರುವುದು ಹಾಗೂ ಚುನಾವಣಾ ಕರ್ತವ್ಯಗಳ ಹೊರೆ ಅಧಿಕವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. “ಈ ಬೋಧನೇತರ ಕಾರ್ಯಗಳನ್ನು ನಿರ್ವಹಿಸಲು ಪ್ರತ್ಯೇಕ ಗುಮಾಸ್ತರನ್ನು ನೇಮಿಸಿದರೆ, ಶಿಕ್ಷಕರು ಸಂಪೂರ್ಣವಾಗಿ ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸರ್ಕಾರ ಶಿಕ್ಷಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು” ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಭರತ್‌ರಾಜ್, ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಪಿ. ನಾಗರಾಜ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರೇಣುಕೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ವಿನಯ್ ಹೆಗ್ಡೆ, ಸಮನ್ವಯಾಧಿಕಾರಿ ಎಂ. ರಂಗನಾಥ್, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪ್ಪ ಮಾಲತೇಶ್, ಪ್ರಮುಖರಾದ ಕರಿಬಸಪ್ಪ, ಪುಟ್ಟಪ್ಪ, ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

