ವಿಶ್ವಾಸ ಬದುಕಿಗೆ ಭದ್ರ ಬುನಾದಿ ; ರಂಭಾಪುರಿ ಜಗದ್ಗುರುಗಳು

Written by malnadtimes.com

Published on:

ಬಾಳೆಹೊನ್ನೂರು ; ಜೀವನದ ಸಮೃದ್ಧಿಗೆ ಸಮಾಧಾನಕ್ಕೆ ದೈವೀ ಗುಣಗಳು ಕಾರಣವಾಗುತ್ತವೆ. ದೈವೀ ಗುಣಗಳನ್ನು ಸಂರಕ್ಷಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ದೇವರು ಧರ್ಮ ನಂಬಿಗೆ ಮೇಲೆ ನಿಂತಿವೆ. ಇವುಗಳಲ್ಲಿ ನಂಬಿಗೆ ವಿಶ್ವಾಸ ಕಳೆದುಕೊಳ್ಳಬಾರದು. ವಿಶ್ವಾಸ ಬದುಕಿಗೆ ಭದ್ರ ಬುನಾದಿ ಒದಗಿಸುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಮಂಗಳವಾರ ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ ಶತರುದ್ರಾಭಿಷೇಕ ರಾಜೋಪಚಾರ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮಾನವ ಜೀವನದ ನಿರಂತರ ಹೋರಾಟದಲ್ಲಿ ದೇಹ ಮನ ಬುದ್ಧಿ ಮಲಿನವಾಗುವುದುಂಟು. ಅವುಗಳನ್ನು ಶ್ರದ್ಧೆಯಿಂದ ನಿರ್ಮಲಗೊಳಿಸುವತ್ತ ಗಮನವಿರಬೇಕು. ಹುಲ್ಲು ತಿಂದು ಬದುಕುವ ಪ್ರಾಣಿಗಳೆಂದೂ ಸಿರಿ ಸಂಪದಕ್ಕೆ ಆಶೆ ಮಾಡುವುದಿಲ್ಲ. ಆದರೆ ಅದೇ ಪ್ರಾಣಿಗಳ ಹಾಲನ್ನು ಕುಡಿದ ಮನುಷ್ಯ ದನಗಳ ಹುಲ್ಲನ್ನು ತಿನ್ನಲು ಹಿಂಜರಿಯಲಾರ. ಗುಲಾಬಿ ಗಿಡದಲ್ಲಿ ಹೂವಿದೆ ಹಸಿರಿದೆ ಮುಳ್ಳೂ ಇದೆ. ಕೆಲವರ ಲಕ್ಷ್ಯ ಹೂವಿನತ್ತ ಇದ್ದರೆ ಕೆಲವರ ಲಕ್ಷ್ಯ ಮುಳ್ಳಿನತ್ತ ಇರುತ್ತದೆ. ಈ ಜಗತ್ತು ಗುಲಾಬಿ ಕಂಟಿ. ಕೆಲವರು ಹೂವಿನ ಸ್ವರೂಪ ಕಂಡರೆ ಕೆಲವರು ಕುರೂಪವನ್ನೇ ಕಾಣುತ್ತಾರೆ. ನೋಡುವ ನೋಟ ಚೆನ್ನಾಗಿದ್ದರೆ ಬದುಕು ಸುಂದರವಾಗಿ ಕಾಣುತ್ತದೆ. ಉರಿಯುವ ಹಣತೆ ಮಣ್ಣಿನದಾದರೇನು ಹೊನ್ನಿನದಾದರೇನು. ಉರಿಯುವ ಜ್ಯೋತಿ ಒಂದೇ. ಜಗತ್ತನ್ನು ನಿರ್ಮಿಸಿದ ಪರಮಾತ್ಮ ಒಬ್ಬನೇ. ಆದರೆ ಹೆಸರುಗಳು ಅನಂತವಾಗಿವೆ. ಶಿವನಿಗೆ ಅಭಿಷೇಕ ಬಹಳ ಪ್ರೀತಿ. ಶಿವನಿಗೆ ಜಲಧಾರೆ-ಕ್ಷೀರಾಭಿಷೇಕ ಮಾಡಿ ಮನುಷ್ಯ ಸಂತೃಪ್ತ ಭಾವನೆ ತಾಳುತ್ತಾನೆ. ದೇವರು ಧರ್ಮ ಮತ್ತು ಗುರುವಿನಲ್ಲಿ ಶ್ರದ್ಧಾ ಮತ್ತು ನಂಬಿಗೆ ಕಳೆದುಕೊಳ್ಳಬಾರದೆಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿಗಳಾದ ಬೆಳಗಾಲಪೇಟೆ ಹಿರೇಮಠದ ಸಿದ್ಧಲಿಂಗ ಶಾಸ್ತ್ರಿಗಳು ಹಾಗೂ ಗುರುಕುಲ ಸಾಧಕರು ಶತರುದ್ರಾಭಿಷೇಕ-ರಾಜೋಪಚಾರ ಪೂಜಾ ಸಂಕಲ್ಪ ಪೂರ್ವಕ ನೆರವೇರಿಸಿದರು.

ಈ ಪೂಜಾ ಸಮಾರಂಭದಲ್ಲಿ ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ಲೆಕ್ಕಾಧಿಕಾರಿ ಸಂಕಪ್ಪನವರ, ಶಿವಪ್ರಕಾಶ ಶಾಸ್ತ್ರಿಗಳು, ಮಧುಕುಮಾರ ಶಾಸ್ತ್ರಿಗಳು, ಚಂದ್ರಶೇಖರಸ್ವಾಮಿ, ರೇಣುಕಸ್ವಾಮಿ, ರವಿ, ರುದ್ರೇಶ, ಗದಿಗೆಯ್ಯ ಹಿರೇಮಠ, ಗಂಗಾಧರ, ಶಿವಕುಮಾರ ಹಿರೇಮಠ, ಕುಮಾರ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.

Leave a Comment