ರಿಪ್ಪನ್‌ಪೇಟೆ ; ಹುಂಚ ಗ್ರಾಮದ ಸ.ನಂ. 49 ರಲ್ಲಿನ ಕಂದಾಯ ಜಮೀನು ಸಾಗುವಳಿ ಮಾಡದೇ ಅಕ್ರಮವಾಗಿ ಬೇಲಿ ಹಾಕಲು ಹೋದ ಪ್ರಭಾವಿ ವ್ಯಕ್ತಿಯ ವಿರುದ್ಧ ಗ್ರಾಮಸ್ಥರು ತಡೆದು ಅಕ್ರಮ ಬೇಲಿ ಕಿತ್ತು ಹಾಕಿದ ಘಟನೆ ಭಾನುವಾರ ಸಂಜೆ ನಡೆದಿದ್ದು ಸ್ಥಳಕ್ಕೆ 112 ಪೊಲೀಸರು ಮತ್ತು ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿ ದಾಖಲೆಗಳನ್ನು ಹಾಜರುಪಡಿಸುವ ಮೂಲಕ ಯಾರು ಈ ಜಾಗ ಪ್ರವೇಶಿಸದಂತೆ ಸೂಚನೆ ನೀಡಿದರು.
ಈ ಸ.ನಂ. 49 ಜಾಗದಲ್ಲಿ 30 ಗುಂಟೆ ಜಮೀನು ನನಗೆ ಮಂಜೂರಾಗಿದೆ. ಸರ್ವೇ ಸ್ಕೆಚ್ ಸಹ ಆಗಿದೆ ಎಂದು ಸಾಗುವಳಿಯಲ್ಲದ ಜಮೀನಿನ ಜಾಗವನ್ನು ಕಬಳಿಸುವ ಉದ್ದೇಶದಿಂದ ಉಲ್ಲಾಸ್ ಎಂಬುವರು ಅಕ್ರಮವಾಗಿ ಬೇಲಿ ಹಾಕಲು ಹೊರಟಿದ್ದಾರೆಂದು ಆರೋಪಿಸಿ ಗ್ರಾಮದ ರಾಜೇಂದ್ರ, ಸದಾನಂದ, ರಾಘವೇಂದ್ರ, ಗಿರೀಶ್, ಸದಾಶಿವಾ, ನರಸಿಂಹ, ಜೈರಾಮ, ನಾಗೇಶ, ಇನ್ನಿತರ ಹಲವರು ತಡೆ ಮಾಡುವುದರೊಂದಿಗೆ ಅಕ್ರಮವಾಗಿ ಹಾಕಲಾದ ಬೇಲಿಯನ್ನು ಕಿತ್ತು ಹಾಕಿ ಜಾಗವನ್ನು ರಕ್ಷಣೆ ಮಾಡುವಲ್ಲಿ ಮುಂದಾಗಿದ್ದಾರೆ.
ಈ ಜಾಗವು ಗೋಮಾಳ ಜಮೀನಾಗಿದ್ದು ಪರಿಸರ ರಕ್ಷಣೆಯೊಂದಿಗೆ ಕೆಳಭಾಗದಲ್ಲಿ ಹರಿಯುವ ಹಳ್ಳದಲ್ಲಿ ಅಂತರ್ಜಲ ಬತ್ತಿ ಹೋಗದಂತೆ ಈ ಜಾಗದಲ್ಲಿ ಈ ಹಿಂದೆ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಇಂಗು ಗುಂಡಿಯನ್ನು ಸಹ ಮಾಡಲಾಗಿದೆ. ಅಲ್ಲದೆ ಈ ಜಾಗವನ್ನು ಬಿಟ್ಟರೆ ಮುಂದೆ ಜಾನುವಾರುಗಳ ಮೇವಿಗೂ ಪರದಾಡಬೇಕಾಗುವುದೆಂದು ಗ್ರಾಮಸ್ಥರು ಮಾಧ್ಯಮದವರ ಮುಂದೆ ತಮ್ಮ ಅಂತರಾಳದ ಮಾತನ್ನು ಹಂಚಿಕೊಳ್ಳುವ ಮೂಲಕ ತಾಲ್ಲೂಕು ತಹಶೀಲ್ದಾರ ಸ್ಥಳಕ್ಕೆ ಭೇಟಿ ನೀಡಿ ಜಾಗದ ನಕ್ಷೆ ತಯಾರಿಸಿರುವವರ ವಿರುದ್ಧ ಕ್ರಮ ಕೈಗೊಂಡು ಖಾಸಗಿಯವರ ಪಾಲಾಗುವುದನ್ನು ತಡೆಹಿಡಿಯುವಂತೆ ಸಹ ಆಗ್ರಹಿಸಿದರು.
ಸುದ್ದಿ ತಿಳಿಯುತ್ತಿದ್ದಂತೆ 112 ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಎರಡು ಕಡೆಯವರಿಗೂ ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರೂ ಕೂಡಾ ಪ್ರಯೋಜನವಾಗದೇ ಇದ್ದು ನಂತರ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಕುಮಾರ್ ಸ್ಥಳಕ್ಕೆ ಬೇಟಿ ನೀಡಿ ಎರಡು ಕಡೆಯವರ ಸಮಸ್ಯೆಯನ್ನು ಆಲಿಸಿ ನಂತರ ಎರಡು ಕಡೆಯವರು ಈ ವಿವಾದಿತ ಜಾಗದಲ್ಲಿ ಪ್ರವೇಶಿಸದಂತೆ ಮತ್ತು ಸರ್ವೇ ಇಲಾಖೆವರು ಬಂದು ಕಲ್ಲು ಗಡಿ ಗುರುತಿಸಿ ತಹಸೀಲ್ದಾರ್ ಕಛೇರಿಯಿಂದ ಮಂಜೂರಾತಿ ಆದೇಶದ ಪ್ರತಿ ಇಲ್ಲವೇ ನ್ಯಾಯಾಲಯದ ಆದೇಶವಿದ್ದರೆ ಅದರ ಆದೇಶವನ್ನು ಹಾಜರುಪಡಿಸಿ ಎಂದು ಸೂಚಿಸಿ ಗೊಂದಲವನ್ನು ತಿಳಿಗೊಳಿಸಿದರು.