ಆತ್ಮ ಸಂಯಮ ಆಧ್ಯಾತ್ಮದ ಅಡಿಪಾಯ ; ರಂಭಾಪುರಿ ಜಗದ್ಗುರುಗಳು

Written by malnadtimes.com

Published on:

ಬಾಳೆಹೊನ್ನೂರು ; ಮಾನವನ ಬದುಕು ಒತ್ತಡಗಳಿಂದ ಬಳಲಿ ಹೋಗಿದೆ. ಯಂತ್ರದಂತೆ ದುಡಿದರೂ ಸಂಪತ್ತು ಗಳಿಸಿದರೂ ಶಾಂತಿ ಕಾಣುತ್ತಿಲ್ಲ. ಬಾಳಿನ ವಿಕಾಸಕ್ಕೆ ಆಧ್ಯಾತ್ಮದ ಅರಿವು ಬೇಕು. ಆತ್ಮ ಸಂಯಮ ಆಧ್ಯಾತ್ಮ ಜೀವನದ ಅಡಿಪಾಯವಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ವೀರಗಾಸೆ-ಪುರವಂತರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

WhatsApp Group Join Now
Telegram Group Join Now
Instagram Group Join Now

ವಿಜ್ಞಾನ ತಂತ್ರಜ್ಞಾನದಿಂದ ಮನುಷ್ಯನ ಪ್ರಗತಿ ಅದ್ಭುತವಾಗಿದೆ. ಭೌತಿಕ ಸಿರಿ ಸಂಪತ್ತು ಅಧಿಕಾರ ನೆಮ್ಮದಿ ತರಲಾರದು. ಸತ್ಯ ಧರ್ಮದ ವಿಷಯದಲ್ಲಿ ಒಂದಿಷ್ಟಾದರೂ ಆಧ್ಯಾತ್ಮ ಜ್ಞಾನದ ಅರಿವು ಇರಬೇಕಾದುದು ಅವಶ್ಯಕ. ಬಡವನಿಗೆ ನೆಮ್ಮದಿ ಇರುತ್ತೆ ಹಣ ಇರಲ್ಲ. ಶ್ರೀಮಂತನಿಗೆ ಹಣ ಇರುತ್ತೆ ನೆಮ್ಮದಿ ಇರಲ್ಲ. ಹಣ ನೆಮ್ಮದಿ ಇದ್ದವರಿಗೆ ಒಳ್ಳೆಯ ಗುಣ ಇರಲ್ಲ. ಹಣ ಗುಣ ಮತ್ತು ನೆಮ್ಮದಿ ಇದ್ದವರು ಈ ಭೂಮಿಯ ಮೇಲೆ ಜಾಸ್ತಿ ದಿನ ಇರಲ್ಲ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಎಚ್ಚರಿಸಿದ್ದಾರೆ. ಇಂದಿನ ವಿಜ್ಞಾನ ಯುಗದಲ್ಲಿಯೂ ಸಹ ಶ್ರೀ ವೀರಭದ್ರಸ್ವಾಮಿಯ ಲೀಲೆ ಪವಾಡಗಳು ಅದ್ಭುತವಾಗಿವೆ. ದುಷ್ಟ ಶಕ್ತಿಗಳ ನಿರ್ಮೂಲನೆಗೆ ಮತ್ತು ಶಿವಶಕ್ತಿ ಸಂವರ್ಧನೆ ಶ್ರೀ ವೀರಭದ್ರಸ್ವಾಮಿಯ ಅವತಾರವಾಗಿದೆ. ಜಗದ ಕತ್ತಲೆ ಕಳೆದು ಜ್ಞಾನದ ಬೆಳಗು ಬೀರಲು ಗುರು ಬಹಳಷ್ಟು ಮುಖ್ಯ. ವೀರಶೈವ ಸಂಸ್ಕೃತಿಯ ಬೆಳವಣಿಗೆಗೆ ವೀರಗಾಸೆ ಮತ್ತು ಪುರವಂತರ ಕೊಡುಗೆ ಅಪೂರ್ವವಾದುದು. ಪ್ರಾಚೀನ ಸಂಸ್ಕೃತಿಯ ಅರಿವು ಮೂಡಿಸುವುದೇ ಈ ಸಮಾರಂಭದ ಮೂಲ ಉದ್ದೇಶವೆಂದರು.

ಸಮಾರಂಭವನ್ನು ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶಿವ ಧರ್ಮದ ತಂಗಾಳಿ ಜೀವನ ಉನ್ನತಿಗೆ ಸಹಕಾರಿ. ನಿರ್ಭಯದಿಂದ ಬಾಳುವುದೇ ನಿಜವಾದ ಬದುಕು. ಬದುಕು ಕಲಿಸುವ ಪಾಠಗಳು ಚಿತ್ರ ವಿಚಿತ್ರ. ಅಂಕಗಳನ್ನು ನೀಡಲು ಯಾರೂ ಇಲ್ಲ. ಸಹನೆ ತಾಳ್ಮೆ ಜೊತೆಗಿಲ್ಲದಿದ್ದರೆ ಉನ್ನತಿ ಸಾಧ್ಯವಿಲ್ಲ. ವೀರಶೈವ ಧರ್ಮದಲ್ಲಿ ವೀರಗಾಸೆ ಮತ್ತು ಪುರವಂತರಿಗೆ ವಿಶೇಷ ಗೌರವವಿದೆ. ವೀರಭದ್ರನ ಪರಾಕ್ರಮ ಧರ್ಮ ಸಂರಕ್ಷಣೆಗೆ ಮೂಲವಾಗಿದೆ ಎಂದರು.

ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರಿ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ರಂಭಾಪುರಿ ಬೆಳಗು ಮಾಸ ಪತ್ರಿಕೆಯನ್ನು ಬೆಂಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ್ ಬಿಡುಗಡೆ ಮಾಡಿ ಮಾತನಾಡಿದರು.

ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ರಂಭಾಪುರಿ ಬೆಳಗು ಮಾಸಿಕ ಬಿಡುಗಡೆಗೊಂಡಿತು.

ಧರ್ಮ ಧ್ವಜಾರೋಹಣ ನೆರವೇರಿಸಿದ ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಧರ್ಮ ಪ್ರಜ್ಞೆ, ರಾಷ್ಟ್ರ ಪ್ರಜ್ಞೆ ಹಾಗೂ ಸಾಮಾಜಿಕ ಪ್ರಜ್ಞೆ ಅವಶ್ಯಕ. ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಶ್ರೀ ರಂಭಾಪುರಿ ಪೀಠದ ಸಂದೇಶ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಕಲ ಜೀವಾತ್ಮರಿಗೆ ಶುಭ ಹಾರೈಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ ಸಮಾರಂಭದಲ್ಲಿ ಕವಲೇದುರ್ಗ ಭುವನಗಿರಿ ಸಂಸ್ಥಾನ ಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ಸವಿಸ್ತಾರವಾಗಿ ಪ್ರಾಸ್ತಾವಿಕ ನುಡಿ ನಮನ ಸಲ್ಲಿಸಿದರು. ಮಳಲಿ ಸಂಸ್ಥಾನ ಮಠದ ಡಾ|| ನಾಗಭೂಷಣ ಶ್ರೀಗಳು, ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಶ್ರೀಗಳು, ಕಾರ್ಜುವಳ್ಳಿ ಸದಾಶಿವ ಶ್ರೀಗಳು ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶಿರ್ವದಿಸಿದರು. ತೆಂಡೆಕೆರೆ, ಧನಗೂರು, ಸಂಗೊಳ್ಳಿ, ಬೇರುಗಂಡಿ, ದೋರನಹಳ್ಳಿ, ಅಚಲೇರಿ, ದೊಡ್ಡಸಗರ, ಸಿದ್ಧರಬೆಟ್ಟ, ನಂದಿತಾವರೆ ಶ್ರೀಗಳು ಉಪಸ್ಥಿತರಿದ್ದರು. ಕುಮಾರಿ ನೇಹಾ-ಲಿಖಿತಾ ಮತ್ತು ಧನ್ಯ ಇವರಿಂದ ಭರತ ನಾಟ್ಯ ಜರುಗಿತು.

ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವೀರಗಾಸೆ-ಪುರವಂತರ ಸಮಾರಂಭವನ್ನು ಎಡೆಯೂರು ಶ್ರೀಗಳು ಉದ್ಘಾಟಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಿಳಾ ಮಂಡಳದ ಸದಸ್ಯರಿಂದ ಪ್ರಾರ್ಥನಾ ಗೀತೆ ಜರುಗಿತು.

ಚಿಕ್ಕಮಗಳೂರು ತಾಲೂಕಾ ವೀರಶೈವ ಸಮಾಜದ ಅಧ್ಯಕ್ಷ ಬಿ.ಎ.ಶಿವಶಂಕರ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ವೀರೇಶ ಕುಲಕರ್ಣಿ ನಿರೂಪಿಸಿದರು.

ಬೆಳಿಗ್ಗೆ ಧರ್ಮ ಧ್ವಜಾರೋಹಣ, ಹರಿದ್ರಾಲೇಪನ ಅಂಗವಾಗಿ ಬೋಜಪ್ಪ ನಾಗರಾಜ ಹೊಸಮನೆ, ಶ್ರೀ ವೀರಭದ್ರೇಶ್ವರ ಪುರವಂತಿಕೆ ಕಲಾತಂಡ ನ್ಯಾಮತಿ, ಶ್ರೀ ವೀರಭದ್ರೇಶ್ವರ ತರುಣ ಸಂಘ ಯಲವಿಗಿ ಇವರಿಂದ  ಬಸವರಾಜ ಹೊಸಕಟ್ಟಿ ನ್ಯಾಮತಿ ಇವರ ಮೇಲ್ವಿಚಾರಣೆಯಲ್ಲಿ ಗುಗ್ಗುಳ ಕಾರ್ಯ ವೈಭವದಿಂದ ಜರುಗಿತು.

ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮ ಧ್ವಜಾರೋಹಣ ನೆರವೇರಿತು.

ದಾವಣಗೆರೆ ಶುಭಾ ಈಶ್ವರಪ್ಪ ಶೆಟ್ಟರ್, ಲಲಿತಾ ಶಿವಯೋಗಿ, ಮಲ್ಲಮ್ಮ-ಪ್ರಭುಶಾಸ್ತ್ರಿ ಮತ್ತು ಗಿರಿಜಾ ಕೆ.ವಿ.ಮಲ್ಲಿಕಾರ್ಜುನ ಇವರು ಗುಗ್ಗುಳ ಕಾರ್ಯದ ಸೇವೆ ಸಲ್ಲಿಸಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.

Leave a Comment