ರಾಜ್ಯ ಸರ್ಕಾರ ಸಹಕರಿಸಿದರೆ ರೈತರ ಬಾಳು ಉಜ್ಜಲವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ; ಬಿ.ವೈ. ವಿಜಯೇಂದ್ರ

Written by malnadtimes.com

Published on:

ಬಾಳೆಹೊನ್ನೂರು ; ದುಡಿಯುವ ರೈತನಿಗೆ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಆ ದಿಶೆಯಲ್ಲಿ ರಾಜ್ಯ ಸರ್ಕಾರ ಸಹಕರಿಸಿ ಕಾರ್ಯ ಮಾಡಿದರೆ ರೈತರ ಬಾಳು ಉಜ್ಜಲವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಅವರು ಮಂಗಳವಾರ ಬೆಳಿಗ್ಗೆ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ನರಸಿಂಹರಾಜಪುರ ತಾಲ್ಲೂಕು ಪತ್ರಕರ್ತರ ಸಂಘದಿಂದ ಜರುಗಿದ ಕೃಷಿ ಸಮ್ಮೇಳನ ಹಾಗೂ ಕಾಫಿ-ಅಡಿಕೆ ಬೆಳೆಗಾರರ ಹಿತ ಚಿಂತನ ಮಂಥನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ನರಸಿಂಹರಾಜಪುರ ತಾಲ್ಲೂಕಾ ಪತ್ರಕರ್ತರ ಸಂಘದಿಂದ ಜರುಗಿದ ಕೃಷಿ ಸಮ್ಮೇಳನ ಹಾಗೂ ಕಾಫಿ-ಅಡಿಕೆ ಬೆಳೆಗಾರರ ಹಿತ ಚಿಂತನ ಮಂಥನ ಸಮಾರಂಭದ ಸಾನ್ನಿಧ್ಯ ವಹಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯರ ಕ್ರಾಂತಿ ಸಾಮಾನ್ಯವಾದುದಲ್ಲ. ಸಕಲ ಜೀವಾತ್ಮರನ್ನು ಉದ್ಧರಿಸಿದ ಮಹಾನ್ ಆಚಾರ್ಯ ಪುರುಷರು. ಅವರು ಕೊಟ್ಟ ತತ್ವ ಸಂದೇಶ ಕಾಯಕ ಜೀವನದ ಹಿರಿಮೆ ನಮ್ಮೆಲ್ಲರ ಪ್ರಗತಿಗೆ ಅಡಿಪಾಯ.

ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕೃಷಿ ಸಮ್ಮೇಳನ ಹಮ್ಮಿಕೊಂಡಿರುವುದು ಶ್ರೀ ರಂಭಾಪುರಿ ಪೀಠದ ರೈತ ಪರವಾದ ಕಳಕಳಿ ವೇದ್ಯವಾಗುತ್ತದೆ. ಸಾಧ್ಯವಾದುದನ್ನು ಮಾಡಲು ಶಕ್ತಿ ಸಾಕು. ಅಸಾಧ್ಯವಾದುದನ್ನು ಮಾಡಲು ವಿಶ್ವಾಸ ಮುಖ್ಯ. ಶಕ್ತಿ ವಿಶ್ವಾಸಗಳಿಂದ ಎಲ್ಲವೂ ಸಾಧ್ಯ. ರೈತ ಎಲ್ಲರಂತೆ ಸ್ವಾವಲಂಬಿಗಳಾಗಿ ಬದುಕಬೇಕು. ಆರ್ಥಿಕವಾಗಿ ಸದೃಢನಾಗಬೇಕು. ರೈತರು ಶ್ರಮ ವಹಿಸಿ ದುಡಿದು ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರಕಿದರೆ ಒಳ್ಳೆಯದು. ಪ್ರಕೃತಿಯ ವಿಕೋಪ ಅನಾವೃಷ್ಠಿಯಿಂದ ಕೆಲವು ಸಂದರ್ಭದಲ್ಲಿ ರೈತರಿಗೆ ಹಲವಾರು ಸಂಕಷ್ಟಗಳು ಎದುರಾಗುತ್ತವೆ. ದುಡಿಯುವ ರೈತನಿಗೆ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಆ ದಿಶೆಯಲ್ಲಿ ರಾಜ್ಯ ಸರ್ಕಾರ ಸಹಕರಿಸಿ ಕಾರ್ಯ ಮಾಡಿದರೆ ರೈತರ ಬಾಳು ಉಜ್ಜಲವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ವೀರಶೈವ ಮಠಗಳು ತ್ರಿವಿಧ ದಾಸೋಹದ ಮೂಲಕ ಸಹಸ್ರಾರು ಬಡ ಮಕ್ಕಳಿಗೆ ಶಿಕ್ಷಣ ನೀಡಿದ್ದನ್ನು ಮರೆಯುವಂತಿಲ್ಲ. ಜಗತ್ತಿನಲ್ಲಿ ತಾಯಿಯ ಪ್ರೀತಿ ದೊಡ್ಡದು ಎಂದರು.

ದೇಶ ಕಾಯುವ ಸೈನಿಕ ಅನ್ನ ಕೊಡುವ ರೈತನ ಮರೆಯದಿರಿ ; ರಂಭಾಪುರಿ ಜಗದ್ಗುರುಗಳು

ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಉದ್ಧಾರವಾದರೆ ದೇಶ ಉದ್ಧಾರವಾಗುವುದರಲ್ಲಿ ಅನುಮಾನವಿಲ್ಲ. ನೂರಕ್ಕೆ ಎಪ್ಪತ್ತರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಶ್ರಮದಿಂದ ಬೆವರು ಸುರಿಸಿ ದುಡಿದರೆ ಭೂತಾಯಿ ಕೈ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶ ಸಂರಕ್ಷಣೆಗಾಗಿ ಗಡಿ ಕಾಯುವ ಸೈನಿಕ ಮತ್ತು ಅನ್ನ ಕೊಡುವ ರೈತನನ್ನು ಯಾವತ್ತೂ ಮರೆಯಬಾರದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಭೂಮಿಯಲ್ಲಿ ಅದ್ಭುತ ಶಕ್ತಿಯಿದೆ. ಭೂ ತಾಯಿ ಮಡಲಿಗೆ ಹಿಡಿ ಕಾಳು ಹಾಕಿದರೆ ಖಂಡಗ ಕಾಳು ಕೊಡುತ್ತಾಳೆ. ಒಕ್ಕಲಿಗ ಒಕ್ಕಿದರೆ ಲೋಕವೆಲ್ಲ ಉಕ್ಕುವುದು. ಒಕ್ಕಲಿಗೆ ಒಕ್ಕದಿದ್ದರೆ ಲೋಕವೆಲ್ಲ ಬಿಕ್ಕುವುದೆಂದು ಸರ್ವಜ್ಞ ಕವಿ ಎಚ್ಚರಿಸಿದ್ದಾರೆ. ಮಲೆನಾಡಿನ ಪ್ರಾಂತ್ಯದಲ್ಲಿ ಕಾಫಿ ಮತ್ತು ಅಡಿಕೆ ಬೆಳೆ ಮುಖ್ಯವಾದವುಗಳು. ಕೃಷಿ ಮಾಡುವ ರೈತ ಏನೇ ಸವಾಲುಗಳು ಬಂದರೂ ಅವುಗಳನ್ನು ಎದುರಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕಾಗುತ್ತದೆ. ರೈತರು ಕಷ್ಟ ಬಂದಾಗ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಆತ್ಮಹತ್ಯೆಯಂತಹ ಕಾರ್ಯಕ್ಕೆ ಕೈ ಹಾಕಬಾರದು ಎಂದರು.

ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ನರಸಿಂಹರಾಜಪುರ ತಾಲ್ಲೂಕು ಪತ್ರಕರ್ತರ ಸಂಘದಿಂದ ಜರುಗಿದ ಕೃಷಿ ಸಮ್ಮೇಳನದಲ್ಲಿ ಕೃಷಿ ಮಳಿಗೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು.

ಗಮನ ಗುರಿಯತ್ತ ಇರಬೇಕೆ ಹೊರತು ಸಮಸ್ಯೆ ಅಡೆತಡೆಯ ಮೇಲಲ್ಲ. ಸಮಯ ಮತ್ತು  ಜೀವನ ಅತ್ಯುತ್ತಮ ಶಿಕ್ಷಕರು. ಜೀವನವು ಸಮಯದ ಸಮರ್ಪಕ ಬಳಕೆಯನ್ನು ಕಲಿಸಿದರೆ ಸಮಯವು ಜೀವನದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಕಷ್ಟವೆಂದು ಕೈ ಚೆಲ್ಲಿ ಕೂಡಬಾರದು. ಬಾಳಲು ನೂರಾರು ದಾರಿ ತೋರುವ ಈ ಬದುಕು ಸದಾ ಸುಂದರ ಎಂಬುದನ್ನು ಮರೆಯಬಾರದು. ಮಾವಿನ ಮರಕ್ಕೆ ಕಲ್ಲು ಹೊಡೆದ ಹುಡುಗನಿಗೆ ಎರಡು ಹಣ್ಣು ಕೊಡುತ್ತದೆ. ಮತ್ತೆ ಮತ್ತೆ ಕಲ್ಲು ಹೊಡೆದಾಗಲೂ ಎರಡೆರಡು ಹಣ್ಣು ಕೊಡುತ್ತದೆ. ಮಾವಿನ ಮರದ ಹತ್ತಿರ ಬಂದು ನಾ ಕಲ್ಲು ಹೊಡೆದಿದ್ದಕ್ಕೆ ನಿನಗೆ ನೋವಾಗಲಿಲ್ಲವೇ ಎಂದ ಹುಡುಗನಿಗೆ ಮಾಮರ ಹೇಳಿತು. ಎತ್ತರಕ್ಕೆ ಬೆಳೆದವರಿಗೆ ಕಲ್ಲು ಹೊಡೆಯುವುದು ಮನುಷ್ಯರ ಸ್ವಭಾವ. ಕಲ್ಲು ಹೊಡೆದವರಿಗೂ ಹಣ್ಣು ಕೊಡು ಇದರಿಂದ ನಿನ್ನ ಬದುಕು ಸಾರ್ಥಕವಾಗುವುದೆಂದು ನನ್ನ ತಾಯಿ ನನಗೆ ಹೇಳಿದ್ದಾಳೆ ಎಂದಿತು. ಇದು ನಿಸರ್ಗದಿಂದ ಮನುಷ್ಯ ಕಲಿಯಬೇಕಾದ ಪಾಠ. ಶ್ರೀ ರಂಭಾಪುರಿ ಪೀಠ ಪೃಥ್ವಿ ತತ್ವದ ಪೀಠ. ಶ್ರೀ ಜಗದ್ಗುರು ರೇಣುಕಾಚಾರ್ಯರು ಹಸಿರು ಧ್ವಜವನ್ನೆತ್ತಿ ಶಾಂತಿ ಸಮೃದ್ಧಿ ಕರುಣಿಸಿ ಶುಭ ಹಾರೈಸಿದ್ದನ್ನು ಮರೆಯಲಾಗದೆಂದರು.
 
ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ, ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ ವೈವಿಧ್ಯಮಯವಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ರೀ ರಂಭಾಪುರಿ ಜಗದ್ಗುರುಗಳ ದೂರ ದೃಷ್ಟಿಗೆ ಸಾಕ್ಷಿಯಾಗಿದೆ. ಕೃಷಿ ಮೇಳದಲ್ಲಿ ರೈತರು ಪಾಲ್ಗೊಂಡು ಹೆಚ್ಚಿನ ಜ್ಞಾನವನ್ನು ಪಡೆಯಲು ಮುಂದಾಗಬೇಕೆಂದರು.

ಎನ್.ಆರ್.ಪುರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಬಿ.ಎಸ್. ಪ್ರಾಸ್ತಾವಿಕ ಮಾತನಾಡಿ, ಈ ಭಾಗದ ಕಾಫಿ-ಅಡಿಕೆ ಬೆಳೆಗಾರರ ಹಿತ ಚಿಂತನ ಮಂಥನದ ಉದ್ದೇಶ ಹೊಂದಿ ಈ ಕೃಷಿ ಸಮ್ಮೇಳನ ಏರ್ಪಡಿಸಿದೆ. ಈ ಸಮಾರಂಭದ ಜೊತೆಗೆ ಮತ್ತೆರಡು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿಕರು ಇದರ ಪ್ರಯೋಜನ ಪಡೆಯಬೇಕು ಕೃಷಿಕರಿಗೆ ಪ್ರಾಣಿಗಳ ಹಾವಳಿಯಿಂದ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ವೈಜ್ಞಾನಿಕ ಕ್ರಮ, ಅಡಿಕೆ ರೋಗಕ್ಕೆ ಸೂಕ್ತ ಪರಿಹಾರಕ್ಕಾಗಿ ಪ್ರತ್ಯೇಕ ಅಡಿಕೆ ಮಂಡಳಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದ ಅವರು, ಸರ್ಕಾರದ ಮಟ್ಟದಲ್ಲಿ ಕೃಷಿಕರಿಗೆ ಆಗಬೇಕಾದ ಅನುಕೂಲಗಳನ್ನು ಮಾಡಿಕೊಡಲು ತಿಳಿಸಿದರು.

ಮಾಜಿ ಸಚಿವ ಡಿ.ಎನ್.ಜೀವರಾಜ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ, ಧರ್ಮರಾಜ ಹೊಂಕ್ರವಲ್ಲಿ, ಹೆಚ್.ಬಿ. ರಾಜಗೋಪಾಲ್, ರವಿಚಂದ್ರ, ಕೊರಟಗೆರೆ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೃಷಿ ತಜ್ಞ ಚಂದ್ರಶೇಖರ ನಾರಣಾಪುರ ಹಾಗೂ ವೀರಭದ್ರಗೌಡ ಕೆ.ವಿ. ಕುಪ್ಪಗೋಡು ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ತೆಂಡೆಕೆರೆ, ಧನಗೂರು, ಸಂಗೊಳ್ಳಿ, ಬೇರುಗಂಡಿ, ಅಚಲೇರಿ, ಹಂಪಸಾಗರ, ಕೆಂಭಾವಿ, ದೊಡ್ಡಸಗರ, ಸಿದ್ಧರಬೆಟ್ಟ, ಶ್ರೀಗಳು ಉಪಸ್ಥಿತರಿದ್ದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಕುಮಾರಿ ಅನ್ವಿತ-ವಂದನ ಇವರು ಭರತ ನಾಟ್ಯ ಪ್ರದರ್ಶನ ಮಾಡಿದರು.

ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ನರಸಿಂಹರಾಜಪುರ ತಾಲ್ಲೂಕು ಪತ್ರಕರ್ತರ ಸಂಘದಿಂದ ಜರುಗಿದ ಕೃಷಿ ಸಮ್ಮೇಳನ ಹಾಗೂ ಕಾಫಿ-ಅಡಿಕೆ ಬೆಳೆಗಾರರ ಹಿತ ಚಿಂತನ ಮಂಥನ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶ್ರೀ ರಂಭಾಪುರಿ ಜಗದ್ಗುರುಗಳವರಿಂದ ಆಶೀರ್ವಾದ ಪಡೆದರು.

ಅ.ಭಾ.ವೀರಶೈವ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವನಮಾಲಾ ಮೃತ್ಯುಂಜಯ ಅಲ್ದೂರು ಸರ್ವರನ್ನು ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ಇವರಿಂದ ಪ್ರಾರ್ಥನೆ, ಹೇಮಲತಾ ಶಿಕ್ಷಕರು ಬಿಕ್ಕೋಡು ಹಾಗೂ ಲೀಲಾವತಿ ಕೆ.ಎಸ್. ಶಿಕ್ಷಕರು ಪಡುವಳಲು ಇವರು ನಿರೂಪಿಸಿದರು.ಪ್ರವೀಣ ಬೆಳಗೊಳ ರೈತಗೀತೆ ಹಾಡಿದರು.

ಸಮಾರಂಭಕ್ಕೂ ಮುನ್ನ ಸಾವಯವ ಸಿರಿ ಧಾನ್ಯಗಳ ಮಾರಾಟದ ಮಳಿಗೆ ಸೇರಿದಂತೆ ಕೃಷಿ ತೋಟಗಾರಿಕೆಗೆ ಸಂಬಂಧಪಟ್ಟ ವಿಶೇಷ ಮಳಿಗೆಗಳನ್ನು, ಕೊಪ್ಪದ ಎ.ಎಲ್.ಎನ್.ರಾವ್ ಆಯುರ್ವೇದ ಆಸ್ಪತ್ರೆಯ ನುರಿತ ವೈದ್ಯರಿಂದ ಏರ್ಪಡಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಕಾಫಿ ಸಂಶೋಧನಾ ಕೇಂದ್ರದ ನುರಿತ ತಂತ್ರಜ್ಞರು ರೈತರ ಜಮೀನಿನ ಮಣ್ಣಿನ ಮಾದರಿಯನ್ನು ಪರೀಕ್ಷಿಸಿ ಸ್ಥಳದಲ್ಲಿಯೇ ವರದಿ ನೀಡಿದರು.

Leave a Comment