ಹೊಸನಗರ

ಹೊಟ್ಟೆಗೆ ಅನ್ನವೂ ಇಲ್ಲ, ಸರ್ಕಾರದ ಭಾಗ್ಯವೂ ಇಲ್ಲ: 4 ದಶಕಗಳಿಂದ ಪಡಿತರ ಚೀಟಿಗಾಗಿ ಕಾಯುತ್ತಿರುವ 73ರ ವೃದ್ಧೆಯ ಕರುಣಾಜನಕ ಕಥೆ!

73 ವರ್ಷದ ವೃದ್ಧೆಯೊಬ್ಬರು ಕಳೆದ ನಾಲ್ಕು ದಶಕಗಳಿಂದ ಒಂದು ರೇಷನ್ ಕಾರ್ಡ್‌ಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ.

Adagodi women Ration card

ಹೊಸನಗರ: ಬಡವರಿಗಾಗಿ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಅವು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬುದಕ್ಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಡಗೋಡಿಯ ಈ ಘಟನೆಯೇ ಸಾಕ್ಷಿ. ಇಲ್ಲಿನ 73 ವರ್ಷದ ವೃದ್ಧೆಯೊಬ್ಬರು ಕಳೆದ ನಾಲ್ಕು ದಶಕಗಳಿಂದ ಒಂದು ರೇಷನ್ ಕಾರ್ಡ್‌ಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಅಡಗೋಡಿಯಲ್ಲಿ ವಾಸವಿರುವ ವನಜ ಶೆಡ್ತಿ ಎಂಬುವವರೇ ಈ ಸಂಕಷ್ಟಕ್ಕೆ ಸಿಲುಕಿರುವ ಹಿರಿಯ ಜೀವ. ಮೂಲತಃ ಉಡುಪಿ ಜಿಲ್ಲೆಯ ಕಾವಡಿ ಗ್ರಾಮದವರಾದ ಇವರು, ಬಾಲ್ಯದಲ್ಲೇ ಅಂದರೆ 12ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ತೀರ್ಥಹಳ್ಳಿಯ ಮಂಡಗದ್ದೆಗೆ ಬಂದಿದ್ದರು. ಬದುಕಿನ ಬಂಡಿ ಸಾಗಿಸಲು ಮಗನೊಂದಿಗೆ ಬೆಂಗಳೂರಿಗೆ ವಲಸೆ ಹೋಗಿದ್ದ ಇವರು, ನಗರದ ಜೀವನಕ್ಕೆ ಹೊಂದಿಕೊಳ್ಳಲಾಗದೆ ಮರಳಿ ಊರಿಗೆ ಬಂದು ಹೊಸನಗರದ ಅಡಗೋಡಿಯಲ್ಲಿ ನೆಲೆ ನಿಂತಿದ್ದಾರೆ.

ಸದ್ಯ ಯಾರ ಆಸರೆಯೂ ಇಲ್ಲದೆ ಒಂಟಿಯಾಗಿ ಬದುಕುತ್ತಿರುವ ವನಜ ಶೆಡ್ತಿ ಅವರಿಗೆ ವಯೋಸಹಜ ಕಾಯಿಲೆಗಳಾದ ರಕ್ತದೊತ್ತಡ (BP), ಮಧುಮೇಹ ಹಾಗೂ ತೀವ್ರ ಕಾಲು ನೋವು ಕಾಡುತ್ತಿದೆ. ದುಡಿದು ತಿನ್ನುವ ಶಕ್ತಿ ಇಲ್ಲದ ಇವರಿಗೆ, ಸರ್ಕಾರದಿಂದ ಸಿಗುವ ಅಲ್ಪ ಮೊತ್ತದ ವೃದ್ಧಾಪ್ಯ ವೇತನವೇ ಜೀವನಾಧಾರವಾಗಿದೆ. ಆದರೆ, ಪಡಿತರ ಚೀಟಿ ಇಲ್ಲದ ಕಾರಣ ‘ಅನ್ನಭಾಗ್ಯ’ದಂತಹ ಮಹತ್ವದ ಯೋಜನೆಗಳ ಸೌಲಭ್ಯ ಇವರಿಗೆ ಮರೀಚಿಕೆಯಾಗಿದೆ. ಸಿಗುವ ಅಲ್ಪ ಪಿಂಚಣಿ ಹಣದಲ್ಲಿ ದುಬಾರಿ ಬೆಲೆ ತೆತ್ತು ಅಕ್ಕಿ ಹಾಗೂ ದಿನಸಿ ಸಾಮಗ್ರಿಗಳನ್ನು ಖರೀದಿಸುವುದು ಇವರಿಗೆ ಅಸಾಧ್ಯವಾಗಿದೆ.

“ಈ ಇಳಿವಯಸ್ಸಿನಲ್ಲಿ ಬದುಕುವುದೇ ದುಸ್ತರವಾಗಿದೆ. ನನಗೆ ಸರ್ಕಾರದ ಯಾವುದೇ ಭಾಗ್ಯವೂ ಸಿಗುತ್ತಿಲ್ಲ, ಹೊಟ್ಟೆಗೆ ಅನ್ನವೂ ಇಲ್ಲದಂತಾಗಿದೆ. ದಯವಿಟ್ಟು ನನಗೊಂದು ಪಡಿತರ ಚೀಟಿ ಮಾಡಿಸಿಕೊಟ್ಟು ಬದುಕಲು ದಾರಿ ಮಾಡಿಕೊಡಿ” ಎಂದು ವನಜ ಶೆಡ್ತಿ ಅವರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ಕಣ್ಣೀರಿಡುತ್ತಾ ಮನವಿ ಮಾಡುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ, ಈ ವೃದ್ಧೆಯ ಕಷ್ಟಕ್ಕೆ ಸ್ಪಂದಿಸುವರೇ ಎಂಬುದನ್ನು ಕಾದು ನೋಡಬೇಕಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]