ತೀರ್ಥಹಳ್ಳಿ ; ನಿನ್ನೆ ಇಲ್ಲಿನ ತುಂಗಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕನ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಮೃತರನ್ನು ಸೀಬಿನಕೆರೆ ನಿವಾಸಿ ಅಕ್ಷಯ್ (26) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ವೇಳೆ ಅಕ್ಷಯ್ ತುಂಗಾ ನದಿಗೆ ಈಜಲು ತೆರಳಿದ್ದನು. ನದಿಯ ತಟದ ಕಲ್ಲು ಬಂಡೆಯ ಮೇಲೆ ತನ್ನ ಬಟ್ಟೆ, ಚಪ್ಪಲಿ ಹಾಗೂ ಮೊಬೈಲ್ ಫೋನ್ ಇರಿಸಿ ನದಿಗೆ ಇಳಿದಿದ್ದರು. ಆದರೆ, ದೀರ್ಘಕಾಲದ ನಂತರವೂ ಅವರು ವಾಪಸ್ ಬಾರದಿದ್ದಾಗ ಸ್ಥಳೀಯರಲ್ಲಿ ಆತಂಕ ಶುರುವಾಗಿತ್ತು. ಅಕ್ಷಯ್ ತೀರ್ಥಹಳ್ಳಿಯಲ್ಲೇ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಈಶ್ವರ್ ಮಲ್ಪೆ ತಂಡದಿಂದ ಶೋಧ ;
ಯುವಕ ನಾಪತ್ತೆಯಾದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡ ಇಂದು ಬೆಳಿಗ್ಗೆ ನದಿಯಲ್ಲಿ ತೀವ್ರ ಶೋಧ ಕಾರ್ಯ ನಡೆಸಿತು. ನದಿಗೆ ಇಳಿದಿದ್ದ ಸ್ಥಳದ ಕೆಲವೇ ಅಡಿಗಳ ವ್ಯಾಪ್ತಿಯಲ್ಲಿ ಅಕ್ಷಯ್ ಅವರ ಶವ ಪತ್ತೆಯಾಗಿದೆ.
ಲೇಖನವನ್ನು ಮುಂದುವರಿಸಿ ಓದಿ
ಮೃತ ಅಕ್ಷಯ್ ಬಳಸುತ್ತಿದ್ದ ಮೊಬೈಲ್ ಫೋನ್ ಸಂಖ್ಯೆಯು ಬೇರೆಯವರ ಹೆಸರಿನಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ.
ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

