ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15 ದಿನಗಳ ಕಾಲ ನಡೆಯಬೇಕಿದ್ದ ವಿಧಾನಸಭೆ ಅಧಿವೇಶನವನ್ನು ಕೇವಲ 7 ದಿನಗಳಿಗೆ ಸೀಮಿತಗೊಳಿಸಲಾಗಿದೆ. ನಿಗದಿತ ಅವಧಿಗಿಂತ ಎರಡು ದಿನ ಮುಂಚಿತವಾಗಿಯೇ ಅಧಿವೇಶನವನ್ನು ಮುಕ್ತಾಯಗೊಳಿಸುವ ಮೂಲಕ ಜನರ ಸಮಸ್ಯೆಗಳ ಚರ್ಚೆಗೆ ಸರ್ಕಾರ ಅವಕಾಶವೇ ನೀಡಲಿಲ್ಲ ಎಂದು ಆರೋಪಿಸಿದರು.
ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರದ ಭರವಸೆ ಹುಸಿಯಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
ಲೇಖನವನ್ನು ಮುಂದುವರಿಸಿ ಓದಿ
ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಅಕ್ರಮ ವರ್ಗಾವಣೆ ಪ್ರಕರಣವನ್ನು ಪ್ರಸ್ತಾಪಿಸಿದ ಚನ್ನಬಸಪ್ಪ, ಈ ಪ್ರಕರಣದಿಂದ ಶಿವಮೊಗ್ಗದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಕುಟುಂಬ ಇಂದು ಸಂಕಷ್ಟದಲ್ಲಿದೆ ಎಂದು ಹೇಳಿದರು.
ಮಾರ್ಚ್ ತಿಂಗಳಲ್ಲಿ ಕೆಲವೇ ದಿನಗಳಲ್ಲಿ ₹25 ಕೋಟಿ, ₹50 ಕೋಟಿಯಂತೆ ದೊಡ್ಡ ಮೊತ್ತದ ಹಣ ಡ್ರಾ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲ್ಪಟ್ಟ ಮಾಜಿ ಸಚಿವ ನಾಗೇಂದ್ರ ಅವರನ್ನು ರಕ್ಷಿಸಲು ಸರ್ಕಾರವೇ ಮುಂದಾಗಿದೆ ಎಂದು ಚನ್ನಬಸಪ್ಪ ಆರೋಪಿಸಿದರು.
“ಒಬ್ಬ ವ್ಯಕ್ತಿಯನ್ನು ರಕ್ಷಿಸಲು ಇಡೀ ಅಧಿವೇಶನವನ್ನೇ ಬಲಿ ಕೊಡಲಾಗಿದೆ. ಭ್ರಷ್ಟಾಚಾರದ ವಿರುದ್ಧ ಉತ್ತರ ನೀಡುವ ಬದಲು ಸರ್ಕಾರ ಅಧಿವೇಶನವನ್ನು ಮುಕ್ತಾಯಗೊಳಿಸಿದೆ” ಎಂದು ಅವರು ಕಿಡಿಕಾರಿದರು.
ಸರ್ಕಾರದ ಆಡಳಿತವು “ಕಳ್ಳನ ಕೈಗೆ ಬೀಗದ ಕೈ ಕೊಟ್ಟಂತೆ” ಆಗಿದೆ ಎಂದು ಟೀಕಿಸಿದ ಅವರು, ಬರ ಪರಿಸ್ಥಿತಿ, ಕೆಪಿಎಸ್‌ಸಿ ಅಕ್ರಮ, ಯುವಜನರ ಸಮಸ್ಯೆಗಳು ಸೇರಿದಂತೆ ಹಲವು ತುರ್ತು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಸರ್ಕಾರ ಅದಕ್ಕೆ ಅವಕಾಶ ನೀಡದೆ ಅಧಿವೇಶನ ಮುಗಿಸಿದೆ ಎಂದು ಹೇಳಿದರು.
ಜನರ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದಕ್ಕಿಂತ ಸರ್ಕಾರ ತನ್ನ ಮೇಲಿರುವ ಆರೋಪಗಳಿಂದ ತಪ್ಪಿಸಿಕೊಳ್ಳುವುದನ್ನೇ ಆದ್ಯತೆ ಮಾಡಿಕೊಂಡಿದೆ ಎಂದು ಶಾಸಕ ಚನ್ನಬಸಪ್ಪ ವಾಗ್ದಾಳಿ ನಡೆಸಿದರು.

