ಬೆಂಗಳೂರು: ಕಸ್ತೂರಿ ರಂಗನ್ ಸಮಿತಿ ವರದಿ ವಿಚಾರವಾಗಿ ಮಲೆನಾಡಿನ ರೈತರು ಯಾವುದೇ ಆತಂಕ ಪಡಬೇಕಾಗಿಲ್ಲ. ರಾಜ್ಯ ಸರ್ಕಾರ ಈ ವರದಿಯನ್ನು ತಿರಸ್ಕರಿಸುವ ಸ್ಪಷ್ಟ ನಿಲುವು ತೆಗೆದುಕೊಂಡಿದ್ದು, ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಹೆಸರಿನಲ್ಲಿ ಕೇಂದ್ರ ಸರ್ಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದು ಖಂಡನೀಯ. ಈಗಾಗಲೇ ರಾಜ್ಯ ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಹೀಗಿರುವಾಗ ಮತ್ತೆ ಕರಡು ಅಧಿಸೂಚನೆ ಪ್ರಕಟಿಸುವುದು ಸರಿಯಲ್ಲ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕದ 1,576 ಗ್ರಾಮ ವ್ಯಾಪ್ತಿಯ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ 484 ಗ್ರಾಮಗಳು ಪ್ರಸ್ತಾವಿತ ಪಟ್ಟಿಯಲ್ಲಿರುವುದರಿಂದ ಮಲೆನಾಡಿನ ರೈತರಲ್ಲಿ ಆತಂಕ ಮೂಡಿದೆ. ಜನವಸತಿ ಮತ್ತು ಕೃಷಿ ಭೂಮಿಯನ್ನೂ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವುದು ರೈತರ ಚಿಂತೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಲೇಖನವನ್ನು ಮುಂದುವರಿಸಿ ಓದಿ
ಆದರೆ ರಾಜ್ಯ ಸರ್ಕಾರ ಈ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ. ಕರಡು ಅಧಿಸೂಚನೆಯನ್ನು ಸರ್ಕಾರ ವಿರೋಧಿಸಲಿದೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಸಹ ವಿಧಾನಸಭೆಯಲ್ಲಿಯೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಮಲೆನಾಡಿನ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ. ರೈತರಿಗೆ ಅನ್ಯಾಯವಾಗುವ ಯಾವುದೇ ನಿರ್ಧಾರವನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ. ಈ ವಿಚಾರವನ್ನು ಆರ್.ವಿ. ದೇಶಪಾಂಡೆ, ಭೀಮಣ್ಣ ಟಿ. ನಾಯಕ್, ಟಿ.ಡಿ. ರಾಜೇಗೌಡ, ಎಚ್.ಡಿ. ತಮ್ಮಯ್ಯ ಹಾಗೂ ಎ.ಎಸ್. ಪೊನ್ನಣ್ಣ ಸೇರಿದಂತೆ ಹಲವರು ಸದನದ ಒಳಗೂ ಹೊರಗೂ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.
ವಿಪಕ್ಷ ನಾಯಕರು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯನ್ನು ಖಂಡಿಸುವುದಕ್ಕೆ ಬದಲಾಗಿ ಮಲೆನಾಡು ರೈತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಮುಂದಾಗಬೇಕಿದ್ದ ಅಧಿವೇಶನದಲ್ಲಿ ಗದ್ದಲ ನಡೆಸಿ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಮಧು ಬಂಗಾರಪ್ಪ ಆರೋಪಿಸಿದರು.
ಈ ವಿಷಯವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ವೈಯಕ್ತಿಕವಾಗಿ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳು ಸಹ ಕರಡು ಅಧಿಸೂಚನೆಯನ್ನು ವಿರೋಧಿಸುವ ನಿಲುವು ಪ್ರಕಟಿಸಿದ್ದು, ರೈತರ ಜೊತೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ನಮ್ಮ ತಂದೆ ಎಸ್. ಬಂಗಾರಪ್ಪ ಅವರು ಸದಾ ರೈತರು ಮತ್ತು ಜನಸಾಮಾನ್ಯರ ಪರವಾಗಿ ನಿಂತವರು. ಅವರ ಆಶಯಗಳನ್ನು ಎತ್ತಿಹಿಡಿಯುವುದು ನನ್ನ ಗುರಿ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

