ಧರ್ಮಾಚರಣೆಯಿಂದ ಸುಖ ಶಾಂತಿ ಪ್ರಾಪ್ತಿ ; ರಂಭಾಪುರಿ ಜಗದ್ಗುರುಗಳು

Written by malnadtimes.com

Published on:

N.R.PURA | ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖ ಶಾಂತಿ ಜೀವನ ಪ್ರಾಪ್ತವಾಗಲು ಮೊದಲು ಧರ್ಮಾಚರಣೆಯನ್ನು ಮಾಡಬೇಕಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಗುರುವಾರ ಬಸವಾಪಟ್ಟಣದ ತೊಟ್ಟಿಮನೆ ವಂಶಸ್ಥರು ನಿರ್ಮಿಸಿದ ಶ್ರೀ ಗಂಗಾಧರೇಶ್ವರಸ್ವಾಮಿ ನೂತನ ದೇವಾಲಯ ಉದ್ಘಾಟಿಸಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ನಂತರ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಬಾಳ ಬದುಕಿಗೆ ಧರ್ಮದ ಬೆಳಕು ಬೇಕು. ಬೆಳಕಿಲ್ಲದ ಬಾಳಿಗೆ ಬೆಲೆ ನೆಲೆಯಿಲ್ಲ. ಬೆಳಕಿದ್ದರೆ ಯಾವುದರ ಭಯವೂ ಮನುಷ್ಯನಿಗೆ ಇರುವುದಿಲ್ಲ. ಇಹ ಪರ ಜೀವನದ ಶ್ರೇಯಸ್ಸಿಗೆ ಧರ್ಮವೇ ಮೂಲವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ್ದಾರೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿ ದೀಪ. ಅರಿವಿನ ದಾರಿಯಲ್ಲಿ ಮುನ್ನಡೆಸುವುದೇ ಗುರುವಿನ ಪರಮ ಧರ್ಮವಾಗಿದೆ. ಒಂದು ನಿಶ್ಚಿತ ಗುರಿ ಮತ್ತು ಒಬ್ಬ ಶ್ರೇಷ್ಠ ಗುರುವಿನ ಸಹಯೋಗದಿಂದ ಬದುಕು ಉಜ್ವಲಗೊಳ್ಳುತ್ತದೆ. ಸುಖ ಬಯಸುವ ಮನುಷ್ಯ ಧರ್ಮಾಚರಣೆ ಮಾಡಲು ಹಿಂಜರಿಯುತ್ತಾನೆ. ದುಃಖವನ್ನು ಯಾರೂ ಬಯಸುವುದಿಲ್ಲ. ಆದರೆ ಧರ್ಮ ಪರಿಪಾಲನೆ ಮಾಡಲಾರನು. ಸತ್ಯ ಶುದ್ಧ ಸೈದ್ಧಾಂತಿಕ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಳ್ಳಬೇಕಾಗಿದೆ. ತೊಟ್ಟಿಮನೆ ವಂಶಸ್ಥರು ಧರ್ಮ ದೇವರು ಮತ್ತು ಗುರುವಿನಲ್ಲಿ ಅಪಾರ ಶ್ರದ್ಧಾ ನಿಷ್ಠೆಯನ್ನು ಹೊಂದಿದವರು. ಅವರ ಆ ದೈವ ಭಕ್ತಿಯಿಂದಾಗಿ ಇಷ್ಟೊಂದು ಉತ್ತಮ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.

ಕರ್ಪುರವಳ್ಳಿ ಚಂದ್ರಶೇಖರ ಶಿವಾಚಾರ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬಿ.ಸಿ.ನಂಜುಂಡಶೆಟ್ಟಿ, ಬಿ.ಎಸ್.ಮಹದೇವಪ್ಪ, ಬಿ.ಜಿ.ಕರುಣೇಶ್, ಬಿ.ಜಿ.ಶ್ರೀಕಂಠಶೆಟ್ಟಿ, ಬಿ.ಜಿ.ಷಡಕ್ಷರಶೆಟ್ಟರ ಹಾಗೂ ಬಿ.ಜಿ.ದೊಡ್ಡೇಶ ಬಾಬು ಮೊದಲಾದವರು ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ತೊಟ್ಟಿಮನೆ ಮಹದೇವಪ್ಪನವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭಕ್ಕೂ ಮುನ್ನ ನೂತನ ದೇವಾಲಯದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿದರು.

Leave a Comment