HOSANAGARA | ಅಡಿಕೆ ಮಲೆನಾಡು ಭಾಗದ ಪ್ರಮುಖ ಆರ್ಥಿಕ ಬೆಳೆ. ರೈತರ ಜೀವನಾಡಿಯು ಹೌದು. ಹೊಸನಗರ ತಾಲ್ಲೂಕಿನಲ್ಲಿ ಕಳೆದ ಜುಲೈ ತಿಂಗಳಲ್ಲಿ ಅಧಿಕ ಮತ್ತು ಎಡಬಿಡದೆ ಮಳೆಯಾಗುತ್ತಿರುವುದರಿಂದ ಅಡಿಕೆ ಬೆಳೆಯ ಪ್ರಮುಖ ರೋಗ ಕೊಳೆ ರೋಗ ಕಾಣಿಸಿಕೊಂಡಿದ್ದು, ಈ ರೋಗದ ಶಿಲೀಂದ್ರ ಪೈಟಾಪ್ತೆರಾ (Phytophthara) ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಈ ರೋಗಾಣು ಗೊಂಚಲುಗಳ ಕಾಯಿಗಳ ಮೇಲೆ ಕಂದು ಬಣ್ಣದ ನೀರಿನಿಂದ ತೊಯ್ದಂತಹ ಚುಕ್ಕೆಗಳು ಕಂಡು ಬರುತ್ತವೆ. ನಂತರ ಬಿಳಿ ಶಿಲೀಂದ್ರದ ಬೆಳವಣಿಗೆ ಕಂಡು ಬಂದು ಎಳೆಯ, ಬಲಿತ ಕಾಯಿಗಳು ಕೊಳೆಯಲು ಪ್ರಾರಂಭಿಸಿ ಉದುರುತ್ತದೆ. ಗೊಂಚಲುಗಳು ಬೋಳು ಬೋಳಾಗಿ ಕಪ್ಪಾಗಿ ಕಾಣುತ್ತದೆ ಮತ್ತು ಬರಿದಾಗುತ್ತದೆ. ಜೂನ್ ನಿಂದ ಸೆಪ್ಟೆಂಬರ್‌ವರೆಗೆ ರೋಗ ಭಾದೆ ತೀವ್ರವಾಗಿರುತ್ತದೆ. ರೋಗ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಲ್ಲಿ ಸುಳಿ ಕೊಳೆಯುವುದು ಕೂಡ ಕಂಡು ಬರುತ್ತದೆ.
ಅಡಿಕೆ ಕಾಯಿ ಕೊಳೆ ರೋಗ ನಿಯಂತ್ರಣಕ್ಕೆ ಈಗಾಗಲೇ ಶೇ. 1 ರ ಬೋರ್ಡೋ ದ್ರಾವಣ ಸಿಂಪರಣೆ ಮಾಡಿ 25-30 ದಿನಗಳಾಗಿದ್ದಲ್ಲಿ ಮಳೆ ಕಡಿಮೆಯಾದಾಗ ಮುಂಜಾಗ್ರತೆಯ ದೃಷ್ಟಿಯಿಂದ ಮತ್ತೊಮ್ಮೆ ಬೋರ್ಡೋ ದ್ರಾವಣ ಸಿಂಪಡಿಸಬೇಕು. ಕೊಳೆ ರೋಗ ಕಾಣಿಸಿಕೊಂಡಲ್ಲಿ ತಕ್ಷಣದಲ್ಲಿ ರೋಗ ಪೀಡಿತ ಅಡಿಕೆ ಗೊನೆಗಳಿಗೆ ಮತ್ತು ಕೆಳ ಭಾಗದ ಮೂರ್ನಾಲ್ಕು ಹೆಡಗಳಿಗೆ ಹಾಗೂ ಸುತ್ತಮುತ್ತಲಿನ ಎಲ್ಲಾ ಮರಗಳಿಗೆ ಮೆಟಲಾಕ್ಸಿಲ್+ಮ್ಯಾಂಕೋಜೆಬ್ ಇರುವ ಶಿಲೀಂದ್ರ ನಾಶಕ 2.5 ಗ್ರಾಂ ಪ್ರತಿ ಲೀ ನೀರಿಗೆ ಅಥವಾ Cuso4+ಮ್ಯಾಂಕೋಜೆಬ್ 2.5 ಗ್ರಾಂ ಪ್ರತಿ ಲೀ ನೀರಿಗೆ ಅಥವಾ ಮೆಟಲಾಕ್ಸಿಲ್ WS 2 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿಕೊಂಡು ಅಂಟು ದ್ರಾವಣ 1 ಎಂ.ಎಲ್ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು ಮತ್ತು 2-3 ವಾರದೊಳಗೆ ಸದರಿ ತೋಟಕ್ಕೆ ಶೇ. 1 ರ ಬೋರ್ಡೋ ದ್ರಾವಣ ಸಿಂಪರಣೆ ಮಾಡುವುದರಿಂದ ಕೊಳೆ ರೋಗವನ್ನು ನಿಯಂತ್ರಿಸಬಹುದು.
ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, (ಜಿ.ಪಂ) ಹೊಸನಗರ ಇವರನ್ನು ಸಂಪರ್ಕಿಸಲು ಕೋರಿದೆ.
Read More
PMAY :ಮನೆಯಿಲ್ಲದ ಮಹಿಳೆಯರಿಗೆ ಶುಭ ಸುದ್ದಿ ಈ ಯೋಜನೆಯಲ್ಲಿ ಪಡೆಯಬಹುದು ಮನೆ !