ಶಿವಮೊಗ್ಗ: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಮಲೆನಾಡಿನ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯಾದ ‘ಅಂಟಿಗೆ-ಪಿಂಟಿಗೆ’ ಕಲೆ ನಗರದಲ್ಲಿ ಹೊಸ ಕಳೆ ತಂದಿತು. ಕರ್ನಾಟಕ ಜಾನಪದ ಪರಿಷತ್ತು, ಆದಿಚುಂಚನಗಿರಿ ಶಾಖಾ ಮಠ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಸಂಜೆ ನಗರದ ವಿವಿಧ ಬಡಾವಣೆಗಳಲ್ಲಿ ಸಾಂಪ್ರದಾಯಿಕ ಜ್ಯೋತಿಯಾತ್ರೆ ಯಶಸ್ವಿಯಾಗಿ ನೆರವೇರಿತು.
ತೀರ್ಥಹಳ್ಳಿಯ ಬಂದ್ಯಾ ಗ್ರಾಮದ ರಾಜ್ಯ ಪ್ರಶಸ್ತಿ ವಿಜೇತ ಎರಡು ಪ್ರಸಿದ್ಧ ಕಲಾತಂಡಗಳು ನಗರದ ಆದಿಚುಂಚನಗಿರಿ ಕಾಲಭೈರವೇಶ್ವರ ದೇವಸ್ಥಾನದಿಂದ ಪಯಣ ಆರಂಭಿಸಿದವು. ದಾರಿಯುದ್ದಕ್ಕೂ ಹಾದಿಪದಗಳನ್ನು ಹಾಡುತ್ತಾ ಸಾಗಿದ ಕಲಾವಿದರನ್ನು ನಗರದ ಸಾರ್ವಜನಿಕರು ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಸ್ವಾಗತಿಸಿದರು. ಸುಮಾರು 70ಕ್ಕೂ ಹೆಚ್ಚು ಮನೆಗಳ ಹೊಸ್ತಿಲಿಗೆ ತೆರಳಿದ ತಂಡಗಳು, ಜಾನಪದ ಗೀತೆಗಳ ಇಂಪಿನ ಮೂಲಕ ಹಬ್ಬದ ವಾತಾವರಣಕ್ಕೆ ಮೆರುಗು ತುಂಬಿದವು.
ಮನೆಯ ಮುಂದೆ ನಿಂತು ಹೊಸ್ತಿಲು ಹಾಗೂ ಗೃಹ ಸೌಂದರ್ಯವನ್ನು ಬಣ್ಣಿಸುವ ‘ಬಾಗಿಲು ಪದ’ಗಳನ್ನು ಹಾಡಿದಾಗ, ಗೃಹಸ್ಥರು ಬಾಗಿಲು ತೆರೆದು ಕಲಾವಿದರನ್ನು ಆಹ್ವಾನಿಸಿದರು. ನಂತರ ಬಲೀಂದ್ರ ಪೂಜೆ ಮತ್ತು ಜ್ಯೋತಿಯ ಹಿರಿಮೆಯನ್ನು ಸಾರುವ ಜನಪದ ಗೀತೆಗಳನ್ನು ಹಾಡುತ್ತಾ ಮನೆ ಮಂದಿಗೆ ಆಶೀರ್ವದಿಸಲಾಯಿತು. ಈ ಪವಿತ್ರ ದೀಪಕ್ಕೆ ಎಣ್ಣೆ ಸಮರ್ಪಿಸಿ ಪೂಜಿಸುವುದರಿಂದ ಮನೆಯಲ್ಲಿ ಸುಖ, ನೆಮ್ಮದಿ ನೆಲೆಸಿ ನಕಾರಾತ್ಮಕತೆ ದೂರಾಗುತ್ತದೆ ಎಂಬುದು ಇಲ್ಲಿನ ಜನರ ಬಲವಾದ ನಂಬಿಕೆ.
ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಾದಮಯಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.
ಜಾನಪದ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ, ಪ್ರಮುಖರಾದ ಭೈರಾಪುರ ಶಿವಪ್ಪ ಮೇಷ್ಟು, ಕೃಷ್ಣಮೂರ್ತಿ ಬಿಳ್ಳೋಡಿ, ನಾರಾಯಣ್, ಪಿ.ಕೆ. ಸತೀಶ್, ಡಿ. ಗಣೇಶ್, ಭಾರತಿ ರಾಮಕೃಷ್ಣ, ಶ್ರೀನಿವಾಸ ನಗಲಾಪುರ, ದೀಪಕ್ ಸಾಗರ, ಬಾಲರಾಜ್, ಅಮೀಶ್ ಸೇರಿದಂತೆ ಹಲವು ಸಾಂಸ್ಕೃತಿಕ ಗಣ್ಯರು ಭಾಗವಹಿಸಿದ್ದರು.

