ಶಿವಮೊಗ್ಗ: ಭದ್ರಾ ಜಲಾಶಯದಿಂದ ನೀರು ಹರಿಸುವ ವಿಚಾರವಾಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿನ ಅಸಮಾಧಾನ ಇಂದು ಸ್ಫೋಟಗೊಂಡಿದ್ದು, ಆಕ್ರೋಶಗೊಂಡ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಚೇರಿಯ ಮುಖ್ಯ ದ್ವಾರವನ್ನು ಒಡೆದು ಒಳನುಗ್ಗಲು ಯತ್ನಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬೆಳಗ್ಗೆಯಿಂದಲೇ ಟ್ರ್ಯಾಕ್ಟರ್‌ಗಳ ಸಮೇತ ಡಿಸಿ ಕಚೇರಿ ಆವರಣಕ್ಕೆ ಆಗಮಿಸಿದ ಅನ್ನದಾತರು, ಒಣಗುತ್ತಿರುವ ತೋಟಗಾರಿಕೆ ಬೆಳೆಗಳನ್ನು ರಕ್ಷಿಸಲು ಕೂಡಲೇ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಕೆಲವು ಉದ್ರಿಕ್ತ ರೈತರು ಅಡಿಕೆ ಮರದ ದಿಮ್ಮಿಯಿಂದ ಕಚೇರಿಯ ಮುಖ್ಯ ಬಾಗಿಲನ್ನು ಬಡಿದು ಮುರಿಯಲು ಮುಂದಾದರು. ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದಾಗ ಮಧ್ಯಪ್ರವೇಶಿಸಿದ ಪೊಲೀಸರು, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ನಿಯಂತ್ರಿಸಲು ತೀವ್ರ ಹರಸಾಹಸ ಪಟ್ಟರು.
ಕಳೆದ ಕೆಲ ದಿನಗಳಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ಎರಡು ಬಣಗಳ ನಡುವೆ ನೀರು ಹಂಚಿಕೆ ಸಂಬಂಧ ತೀವ್ರ ತಿಕ್ಕಾಟ ನಡೆಯುತ್ತಿದೆ. ಇಂದಿನ ಪ್ರತಿಭಟನಾ ಸ್ಥಳಕ್ಕೆ ಸಂಬಂಧಪಟ್ಟ ಎಂಜಿನಿಯರ್ ರವಿಕುಮಾರ್ ಅವರು ವಿಳಂಬವಾಗಿ ಆಗಮಿಸಿದ್ದು ರೈತರ ಕೋಪವನ್ನು ಮತ್ತಷ್ಟು ಕೆರಳಿಸಿತು. ಅಧಿಕಾರಿಗಳ ಬೇಜವಾಬ್ದಾರಿ ಧೋರಣೆ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಧರಣಿ ಮುಂದುವರಿದಿದ್ದು, ಪ್ರತಿಭಟನಾಕಾರರ ಮನವೊಲಿಸಿ ವಾತಾವರಣವನ್ನು ಶಾಂತಗೊಳಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ.
