Balehonnuru

ಬೆವರಿನಲ್ಲಿ ಸ್ನಾನ ಮಾಡಿದರೆ ಇತಿಹಾಸ ಬದಲಿಸಬಹುದು ; ಶ್ರೀ ರಂಭಾಪುರಿ ಜಗದ್ಗುರುಗಳು

ಬಾಳೆಹೊನ್ನೂರು ; ಸಮಸ್ಯೆಗಳು ಇಲ್ಲದ ಮನುಷ್ಯನೇ ಇಲ್ಲ. ಸಮಸ್ಯೆಗಳು ಅಡ್ಡಿಪಡಿಸುವ ತಡೆಗೋಡೆಗಳಲ್ಲ. ಸಾಗಬೇಕಾದ ದಾರಿಯ ದಿಕ್ಸೂಚಿಯಾಗಿವೆ. ನೀರಿನಲ್ಲಿ ಸ್ನಾನ ಮಾಡಿದರೆ ಬಟ್ಟೆ ಬದಲಿಸಬಹುದು. ಆದರೆ ಬೆವರಿನಲ್ಲಿ ಸ್ನಾನ ಮಾಡಿದರೆ ಇತಿಹಾಸವನ್ನು ಬದಲಿಸಬಹುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಶುಕ್ರವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಧರ್ಮ ಧ್ವಜಾರೋಹಣ ಮತ್ತು ಹರಿದ್ರಾ ಲೇಪನ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಆಶೀರ್ವಚನ ನೀಡುತ್ತಿದ್ದರು.

ಆಧುನಿಕ ವಿಜ್ಞಾನ ಎಲ್ಲಿ ನಿರುತ್ತರವಾಗುವುದೋ ಅಲ್ಲಿಂದ ಭಾರತೀಯ ಆಧ್ಯಾತ್ಮ ಚಿಂತನೆ ಪ್ರಾರಂಭಗೊಳ್ಳುತ್ತದೆ ಎಂದು ಡಾ. ಎಸ್.ರಾಧಾಕೃಷ್ಣನ್ ಹೇಳಿದ ಮಾತು ಸತ್ಯ. ಲೌಕಿಕ ಜ್ಞಾನ ಭೌತಿಕ ಬದುಕಿಗೆ ಬೇಕಾದ ಶ್ರದ್ಧೆ, ಆಸಕ್ತಿ, ಪರಿಶ್ರಮ ನಿಷ್ಠೆ ಹಾಗೂ ಸಮರ್ಪಣೆ ಮೂಲಕ ಪಡೆಯಲು ಸಾಧ್ಯ. ಪಾರಮಾರ್ಥಿಕ ಜ್ಞಾನ ಅತ್ಯಮೂಲ್ಯ. ಪಾರಮಾರ್ಥಿಕ ಜ್ಞಾನ ಭವ್ಯ ಹಾಗೂ ಪವಿತ್ರವಾದುದು. ಬದುಕಿನ ಯಶಸ್ವಿಗಾಗಿ ಲೌಕಿಕ ಜ್ಞಾನ ಹೇಗೆ ಅವಶ್ಯಕವೋ ಹಾಗೆಯೇ ನೊಂದ ಬೆಂದ ಮನಕ್ಕೆ ಆಧ್ಯಾತ್ಮಿಕ ಜ್ಞಾನ ಅವಶ್ಯಕವಾಗಿದೆ. ಕಲಿಯುವ ಹಣ ಸಂಪಾದನೆ ಮಾಡುವ ಕೀರ್ತಿ ಸಂಪಾದಿಸುವುದಷ್ಟೇ ಜೀವನದ ಗುರಿಯಲ್ಲ. ಸಂಸ್ಕಾರ ಮತ್ತು ಆದರ್ಶ ಮೌಲ್ಯಗಳನ್ನು ಪರಿಪಾಲಿಸಿಕೊಂಡು ಬರುವ ಅಗತ್ಯವಿದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ ಎಂದರು.

ಈ ಪವಿತ್ರ ಸಮಾರಂಭದಲ್ಲಿ ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು, ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಬೇರುಗಂಡಿ ಬೃಹನ್ ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಕೊಣ್ಣೂರು ಮರಡಿಮಠದ ಪವಾಡೇಶ್ವರ ಶಿವಾಚಾರ್ಯ ಸ್ವಾಮಿಗಳು, ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಅಡ್ನೂರು ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ಚಿಮ್ಮಲಗಿ ಹಿರೇಮಠದ ಸಿದ್ಧರೇಣುಕ ಶಿವಾಚಾರ್ಯ ಸ್ವಾಮಿಗಳು ಮತ್ತು ದೊಡ್ಡಸಗರ ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ, ಆರ್.ಡಿ.ಮಹೇಂದ್ರ, ಮಹೇಶ ಆಚಾರಿ, ಕೋಕಿಲಮ್ಮ, ಎಂ.ಎಸ್.ಅರುಣೇಶ್, ಹನೀಫ್, ಹಿರಿಯಣ್ಣ ಮೊದಲಾದ ಗಣ್ಯರು ಧರ್ಮ ಧ್ವಜಾರೋಹಣ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಳಗಿನ ಸಂದರ್ಭದಲ್ಲಿ ನ್ಯಾಮತಿ ಬಸವರಾಜ ಹೊಸಕಟ್ಟೆ ನೇತೃತ್ವದಲ್ಲಿ ಶ್ರೀ ವೀರಭದ್ರಸ್ವಾಮಿಗೆ ಗುಗ್ಗುಳ ಪೂಜಾ ನೆರವೇರಿತು. ದಾವಣಗೆರೆ ಶುಭಾ-ಈಶ್ವರಪ್ಪ ಶೆಟ್ಟರು, ಲಲಿತಾ-ಶಿವಯೋಗಿ, ಮಲ್ಲಮ್ಮ-ಪ್ರಭುಶಾಸ್ತ್ರಿ, ಗಿರಿಜಾ-ಕೆ.ವಿ.ಮಲ್ಲಿಕಾರ್ಜುನ ಕುಟುಂಬದವರು ಗುಗ್ಗುಳ ಸೇವಾಕರ್ತರಾಗಿ ಪಾಲ್ಗೊಂಡಿದ್ದರು.

ಬೋಜಪ್ಪ ನಾಗರಾಜ ಹೊಸಮನೆ ಸಂಗಡಿಗರು ಮತ್ತು ನ್ಯಾಮತಿ ಶ್ರೀ ವೀರಭದ್ರೇಶ್ವರ ಪುರವಂತಿಕೆ ಕಲಾ ತಂಡದವರು ಗುಗ್ಗುಳ ಸೇವೆ ಸಲ್ಲಿಸಿದರು.

ಧ್ವಜಾರೋಹಣ ನಂತರ ಸಂಜೆ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿಗೆ ಹರಿದ್ರಾ ಲೇಪನ ಪೂಜಾ ಕಾರ್ಯಗಳು ಜರುಗಿದವು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ನೆರವೇರಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!