ಹೊಸನಗರ: “ಹಸಿದವರ ಹೊಟ್ಟೆ ತುಂಬಿಸಬೇಕಾದ ಸರ್ಕಾರ, ಈಗ ಪಡಿತರದ ಹೆಸರಿನಲ್ಲಿ ಕಲ್ಲು, ಮಣ್ಣು ಮತ್ತು ಧೂಳು ತುಂಬಿದ ರಾಗಿ ನೀಡುವ ಮೂಲಕ ಬಡವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿದೆ!” – ಇದು ಹೊಸನಗರ ತಾಲೂಕಿನಾದ್ಯಂತ ಪಡಿತರ ಫಲಾನುಭವಿಗಳು ಆಡಳಿತ ವ್ಯವಸ್ಥೆಯ ವಿರುದ್ಧ ಹಾಕುತ್ತಿರುವ ಹಿಡಿಶಾಪ.
ತಾಲೂಕಿನ ನ್ಯಾಯಬೆಲೆ ಅಂಗಡಿಗಳ ಮೂಲಕ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ವಿತರಿಸಲಾಗುತ್ತಿರುವ ರಾಗಿಯು ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು, ತಿನ್ನಲು ಯೋಗ್ಯವಲ್ಲದ ಸ್ಥಿತಿಯಲ್ಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬದಲಾದ ನಿಯಮ, ಹೆಚ್ಚಿದ ಗೋಳು
ಹೊಸನಗರ ತಾಲೂಕಿನಲ್ಲಿ ಒಟ್ಟು 46 ನ್ಯಾಯಬೆಲೆ ಅಂಗಡಿಗಳಿದ್ದು, ಸುಮಾರು 26 ಸಾವಿರಕ್ಕೂ ಅಧಿಕ ಬಡ ಕುಟುಂಬಗಳು ಪಡಿತರವನ್ನು ನೆಚ್ಚಿಕೊಂಡಿವೆ. ಈ ಹಿಂದೆ ಸರ್ಕಾರದ ನಿಯಮದಂತೆ ಪ್ರತಿ ಫಲಾನುಭವಿಗೆ ತಲಾ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಯಾವುದೇ ತಕರಾರಿಲ್ಲದೆ ಜನರು ಇದನ್ನು ಬಳಸುತ್ತಿದ್ದರು. ಆದರೆ, ಆಹಾರ ಇಲಾಖೆಯ ಇತ್ತೀಚಿನ ಸುತ್ತೋಲೆಯಂತೆ ಪಡಿತರ ಹಂಚಿಕೆಯಲ್ಲಿ ಬದಲಾವಣೆ ತರಲಾಗಿದ್ದು, ಪ್ರತಿ ಸದಸ್ಯರಿಗೆ 7 ಕೆ.ಜಿ ಅಕ್ಕಿ ಹಾಗೂ 3 ಕೆ.ಜಿ ರಾಗಿ ನೀಡಲಾಗುತ್ತಿದೆ. ಪೌಷ್ಟಿಕಾಂಶದ ದೃಷ್ಟಿಯಿಂದ ರಾಗಿ ವಿತರಣೆ ಮಾಡುವುದಕ್ಕೆ ಸಾರ್ವಜನಿಕರ ವಿರೋಧವಿಲ್ಲ. ಆದರೆ, ಚೀಲ ತೆರೆದರೆ ರಾಗಿಗಿಂತ ಕಲ್ಲು, ಕಸ, ಧೂಳು ಮತ್ತು ಮಣ್ಣೇ ಹೆಚ್ಚಾಗಿ ಕಾಣಿಸುತ್ತಿರುವುದು ಬಡ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

“ರಾಗಿಯನ್ನು ಶುಚಿಗೊಳಿಸಿ ಅಡುಗೆ ಮಾಡುವುದೇ ದೊಡ್ಡ ಸವಾಲಾಗಿದೆ. ಇಂತಹ ಕಳಪೆ ಧಾನ್ಯ ತಿಂದು ಆರೋಗ್ಯ ಹಾಳು ಮಾಡಿಕೊಳ್ಳಬೇಕೇ? ರಾಗಿಯ ಹೆಸರಿನಲ್ಲಿ ಕಲ್ಲು ನೀಡುವ ಬದಲು ಸರ್ಕಾರ ನೇರವಾಗಿ ನಮಗೆ ಮೋಸ ಮಾಡುತ್ತಿದೆ ಎಂದು ಘೋಷಿಸಿಬಿಡಲಿ!”
– ಸ್ಥಳೀಯ ಪಡಿತರ ಫಲಾನುಭವಿಗಳ ಅಳಲು
ನ್ಯಾಯಬೆಲೆ ಅಂಗಡಿಗಳ ಮುಂದೆ ನಿತ್ಯ ವಾಗ್ವಾದ: ವರ್ತಕರ ಅಸಹಾಯಕತೆ
ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ರಾಗಿ ನೋಡಿ ರೊಚ್ಚಿಗೆದ್ದ ಗ್ರಾಹಕರು ಅಂಗಡಿ ಮಾಲೀಕರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಆದರೆ, ಇದರಲ್ಲಿ ಸ್ಥಳೀಯ ವಿತರಕರ ತಪ್ಪೇನೂ ಇಲ್ಲ ಎಂಬುದು ವಾಸ್ತವ. ಸರ್ಕಾರದ ಗೋದಾಮುಗಳಿಂದ ಸರಬರಾಜಾಗುವ ಮೂಟೆಗಳನ್ನೇ ಅವರು ಯಥಾವತ್ತಾಗಿ ಫಲಾನುಭವಿಗಳಿಗೆ ಹಂಚುತ್ತಿದ್ದಾರೆ.
ಉನ್ನತ ಮಟ್ಟದಲ್ಲಿ ನಡೆಯುತ್ತಿರುವ ಈ ಅವ್ಯವಸ್ಥೆಗೆ ಸ್ಥಳೀಯ ಅಂಗಡಿಕಾರರನ್ನು ಹೊಣೆ ಮಾಡದೆ, ಆಹಾರ ಇಲಾಖೆ ಹಾಗೂ ಸರ್ಕಾರದ ಧೋರಣೆ ವಿರುದ್ಧ ನೇರವಾಗಿ ಹೋರಾಟ ರೂಪಿಸಬೇಕು ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಮೇಲಧಿಕಾರಿಗಳಿಗೆ ತಹಶೀಲ್ದಾರ್ ಹಾಗೂ ಇಲಾಖಾ ಅಧಿಕಾರಿಗಳ ಪತ್ರ
ರಾಗಿಯ ಗುಣಮಟ್ಟದಲ್ಲಿ ತೀವ್ರ ದೋಷವಿರುವುದು ಅಧಿಕಾರಿಗಳ ಗಮನಕ್ಕೂ ಬಂದಿದೆ. ಈ ಕುರಿತು ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೊಸನಗರ ತಹಶೀಲ್ದಾರ್ ಭರತ್ರಾಜ್, ಆಹಾರ ನಿರೀಕ್ಷಕರಾದ ಬಾಲಚಂದ್ರ ಹಾಗೂ ನಾಗರಾಜ್ ಅವರು ಸರ್ಕಾರದ ಉನ್ನತ ಮಟ್ಟದ ಆಹಾರ ಸರಬರಾಜು ಅಧಿಕಾರಿಗಳಿಗೆ ಲಿಖಿತ ಪತ್ರ ರವಾನಿಸಿದ್ದಾರೆ.
ಪತ್ರದ ಪ್ರಮುಖಾಂಶಗಳು:
ತಾಲೂಕಿನ 46 ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯ 26 ಸಾವಿರ ಕುಟುಂಬಗಳಿಗೆ ವಿತರಿಸಲಾದ ರಾಗಿಯು ಗುಣಮಟ್ಟದಲ್ಲಿ ತೀರಾ ಕಳಪೆಯಾಗಿದೆ. ಆಹಾರ ಇಲಾಖೆಯ ಸಿಬ್ಬಂದಿ ಪರಿಶೀಲನೆ ನಡೆಸಿದಾಗಲೂ ಈ ದೋಷ ಸಾಬೀತಾಗಿದೆ. ಜನಸಾಮಾನ್ಯರಿಗೆ ಬಳಕೆ ಮಾಡಲು ಇದು ಯೋಗ್ಯವಾಗಿಲ್ಲದ ಕಾರಣ, ಮುಂದಿನ ತಿಂಗಳಿನಿಂದ ಕಡ್ಡಾಯವಾಗಿ ಉತ್ತಮ ಗುಣಮಟ್ಟದ, ಸ್ವಚ್ಛವಾದ ರಾಗಿಯನ್ನು ಮಾತ್ರ ತಾಲೂಕಿಗೆ ಸರಬರಾಜು ಮಾಡಬೇಕು.
ಜನರ ನೇರ ಎಚ್ಚರಿಕೆ
ಬಡವರ ಅನ್ನದ ವಿಚಾರದಲ್ಲಿ ಸರ್ಕಾರ ಮತ್ತು ಆಹಾರ ಇಲಾಖೆ ನಿರ್ಲಕ್ಷ್ಯ ವಹಿಸುವುದನ್ನು ಸಹಿಸಲು ಸಾಧ್ಯವಿಲ್ಲ. ತಕ್ಷಣವೇ ಕಳಪೆ ರಾಗಿ ವಿತರಣೆಯನ್ನು ಸ್ಥಗಿತಗೊಳಿಸಿ, ಉತ್ತಮ ದರ್ಜೆಯ ಆಹಾರ ಧಾನ್ಯವನ್ನು ಒದಗಿಸಬೇಕು. ಇಲ್ಲವಾದಲ್ಲಿ ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರತಿಭಟನೆ ನಡೆಸಿ, ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದಾಗಿ ಫಲಾನುಭವಿಗಳು ಎಚ್ಚರಿಕೆ ನೀಡಿದ್ದಾರೆ.

