ಶಿವಮೊಗ್ಗ : ರಿಪ್ಪನ್‌ಪೇಟೆ-ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕರೊಬ್ಬರಿಗೆ ದಿಢೀರ್ ಹೃದಯಾಘಾತವಾದಾಗ, ಚಾಲಕ ಮತ್ತು ನಿರ್ವಾಹಕ ತೋರಿದ ಮಾನವೀಯತೆ ಹಾಗೂ ತಕ್ಷಣದ ಸ್ಪಂದನೆ ಓರ್ವ ವ್ಯಕ್ತಿಯ ಪ್ರಾಣವನ್ನು ಉಳಿಸಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಬೆನವಳ್ಳಿಯ ನಿವಾಸಿ 45 ವರ್ಷದ ರಮೇಶ್ ಇಂದು ಬೆಳಿಗ್ಗೆ ರಿಪ್ಪನ್‌ಪೇಟೆಯಿಂದ ಶಿವಮೊಗ್ಗಕ್ಕೆ ‘ಗುರುಶಕ್ತಿ’ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಚಿನ್ನಮನೆ ಸಮೀಪ ಬರುತ್ತಿದ್ದಂತೆ ರಮೇಶ್ ಅವರಿಗೆ ತೀವ್ರವಾದ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.
ಈ ತುರ್ತು ಪರಿಸ್ಥಿತಿಯನ್ನು ಗಮನಿಸಿದ ಬಸ್ ಚಾಲಕ ಮುಸ್ತಾಕ್ ಜಯನಗರ ಹಾಗೂ ನಿರ್ವಾಹಕ ಅಶ್ರಫ್ ಜಯನಗರ ಅವರು ಒಂದು ಕ್ಷಣವೂ ಯೋಚಿಸದೆ ತ್ವರಿತ ನಿರ್ಧಾರ ತೆಗೆದುಕೊಂಡರು. ದಾರಿಯ ಮಧ್ಯೆ ಬರುವ ಯಾವುದೇ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಇಳಿಸಲು ಅಥವಾ ಹತ್ತಿಸಿಕೊಳ್ಳಲು ಬಸ್ ನಿಲ್ಲಿಸದೆ, ಟ್ರಾಫಿಕ್ ನಡುವೆಯೂ ನೇರವಾಗಿ ಶಿವಮೊಗ್ಗದ ಗಾಡಿಕೊಪ್ಪದ ಬಳಿ ಇರುವ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ಬಸ್ ಅನ್ನು ವೇಗವಾಗಿ ಚಲಾಯಿಸಿದ್ದಾರೆ.
ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ದ್ವಾರದ ಬಳಿಯೇ ಬಸ್ ನಿಲ್ಲಿಸಿದ ಸಿಬ್ಬಂದಿ, ಇತರ ಸಹಪ್ರಯಾಣಿಕರ ನೆರವಿನಿಂದ ರಮೇಶ್ ಅವರನ್ನು ತಕ್ಷಣವೇ ದಾಖಲಿಸಿದರು. ಹೃದಯಾಘಾತದಂತಹ ಪ್ರಕರಣಗಳಲ್ಲಿ ಆರಂಭಿಕ ಸಮಯ ಅಥವಾ ಗೋಲ್ಡನ್ ಹವರ್ ಅತ್ಯಂತ ನಿರ್ಣಾಯಕವಾಗಿರುತ್ತದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ರಮೇಶ್ ಅವರಿಗೆ ಸರಿಯಾದ ಸಮಯಕ್ಕೆ ವೈದ್ಯಕೀಯ ನೆರವು ದೊರೆತಿದ್ದು, ಅವರ ಪ್ರಾಣಾಪಾಯ ದೂರವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ತಮ್ಮ ದೈನಂದಿನ ಕೆಲಸದ ನಡುವೆಯೂ, ನಿಯಮಗಳಿಗಿಂತ ಪ್ರಯಾಣಿಕನ ಜೀವವೇ ಅತಿ ಮುಖ್ಯ ಎಂದು ಪರಿಗಣಿಸಿದ ಮುಸ್ತಾಕ್ ಮತ್ತು ಅಶ್ರಫ್ ಅವರ ಕಾರ್ಯಕ್ಕೆ ಇದೀಗ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಸಾರ್ವಜನಿಕ ಸಾರಿಗೆ ಸಿಬ್ಬಂದಿ ಇಂತಹ ತುರ್ತು ಸಂದರ್ಭಗಳಲ್ಲಿ ಹೇಗೆ ಜವಾಬ್ದಾರಿಯುತವಾಗಿ ಮತ್ತು ಮಾನವೀಯತೆಯಿಂದ ವರ್ತಿಸಬೇಕು ಎಂಬುದಕ್ಕೆ ಇವರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಸನ್ಮಾನಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.

